Kodagu: ಪಲ್ಟಿಯಾದ ಬೋರ್ ವೆಲ್ ಲಾರಿಯಿಂದ ಡೀಸೆಲ್ ಸೋರಿಕೆ ಆಗುತ್ತಿದ್ದುದರಿಂದ ಅನಾಹುತ ತಪ್ಪಿಸಲು ಕಾರ್ಯಾಚರಣೆ ನಡೆಸುತ್ತಿದ್ದ ಅಗ್ನಿಶಾಮಕ ವಾಹನಕ್ಕೆ ಕ್ರೇನ್ ವಾಹನ ಡಿಕ್ಕಿ ಹೊಡೆದಿರುವ ಮತ್ತು ಪಾದಚಾರಿಯೋರ್ವ ಕಾಲು ಮುರಿದುಕೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ.
ಇಂದು ಬೆಳಿಗ್ಗೆ ಸುಂಟಿಕೊಪ್ಪ ಕಡೆಯಿಂದ ಕುಶಾಲನಗರದತ್ತ ಬರುತ್ತಿದ್ದ ಬೋರ್ ವೆಲ್ ಲಾರಿ ಕುಶಾಲನಗರ ಸಮೀಪದ ಬಸವನಹಳ್ಳಿಯ ಇಳಿಜಾರಿನಲ್ಲಿ ಪಾದಚಾರಿ ಒಬ್ಬರಿಗೆ ಡಿಕ್ಕಿಯಾಗಿ ಮಗುಚಿಕೊಂಡಿದೆ. ಅದರಲ್ಲಿದ್ದ ಡೀಸೆಲ್ ಟ್ಯಾಂಕ್ ನಿಂದ ರಸ್ತೆಗೆ ಡೀಸೆಲ್ ಸೋರಿಕೆ ಆಗುತ್ತಿದ್ದರಿಂದ ವಿಷಯವರಿತ ಕುಶಾಲನಗರ ಅಗ್ನಿಶಾಮಕ ವಾಹನ ಸ್ಥಳಕ್ಕೆ ಧಾವಿಸಿ ಬಂದಿದೆ. ಈ ಸಂದರ್ಭ ಸಾಗಿಬಂದ ಕ್ರೇನ್ ವಾಹನ ಅಗ್ನಿಶಾಮಕ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಅನಾಹುತ ಸಂಭವಿಸಲಿಲ್ಲವಾದರೂ ಈ ಮೊದಲು ಬೋರ್ ವೆಲ್ ಲಾರಿಯಿಂದ ಅಪಘಾತಕ್ಕೊಳಗಾಗಿರುವ ಪಾದಚಾರಿಯ ಕಾಲು ಮುರಿದಿದ್ದು ಮಂಗಳೂರು ಆಸ್ಪತ್ರೆಗೆ ರವಾನಿಸಲಾಗಿದೆ.
