Honeytrap: ಜನಪ್ರಿಯ ನಾಯಕರು, ಇಲಾಖೆ ಅಧಿಕಾರಿಗಳನ್ನೇ ಗುರಿಯಾಗಿಸಿಕೊಂಡು ಸಲುಗೆಯ ಮಾತುಗಳನ್ನಾಡಿ ವಿಡಿಯೋ ಕಾಲ್ ನಲ್ಲಿ ಬಟ್ಟೆ ಬಿಚ್ಚಿದ ಬಳಿಕ ಲಕ್ಷ ಲಕ್ಷ ಹಣಕ್ಕೆ ಬೇಡಿಕೆ ಇರಿಸಿ ಹನಿಟ್ರ್ಯಾಪ್(Honeytrap) ಮಾಡುತ್ತಿದ್ದ ಗಂಭೀರ ಆರೋಪದಲ್ಲಿ ಖತರ್ನಾಕ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ ಪ್ರಕರಣ ಜಿಲ್ಲೆಯ ತೀರ್ಥಹಳ್ಳಿಯಿಂದ ವರದಿಯಾಗಿದೆ.

ಆರೋಪಿಗಳನ್ನು ಧನುಷ್, ಅನ್ಸರ್, ಕಾರ್ತಿಕ್, ಪುಂಡ, ಸಿದ್ದಿಕಿ,ಮೋಹಿತ್ ಗೌಡ ಹಾಗೂ ಇಡೀ ಪ್ರಕರಣದ ರೂವಾರಿ ಬೆಜ್ಜವಳ್ಳಿ ಮೂಲದ ಯುವತಿ ಅನನ್ಯ ಯಾನೆ ಸೌರಭ ಎಂದು ಗುರುತಿಸಲಾಗಿದ್ದು, ವಿಚಾರಣೆಯ ಬಳಿಕ ಇನ್ನೂ ಹಲವರ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಕರಣದ ವಿವರ: ಇಲ್ಲಿನ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರನ್ನು ಪರಿಚಯಿಸಿಕೊಂಡ ಗ್ಯಾಂಗ್ ಅವರಲ್ಲಿ ಮಾತನಾಡುತ್ತ ಮೊಬೈಲ್ ನಂಬರ್ ಪಡೆದುಕೊಂಡಿತ್ತು. ಆ ಬಳಿಕ ಯುವತಿಗೆ ನಂಬರ್ ನೀಡಿ ಆಕೆಯಿಂದ ಫೋನ್ ಕರೆ ಮಾಡಿಸಿ ಮಾತನಾಡಿಸಲಾಗಿತ್ತು. ಒಂದೆರಡು ದಿನಗಳ ಕಾಲ ನಿರಂತರ ಸಂಪರ್ಕ ಸಾಧಿಸಿದ್ದ ಯುವತಿ ಅದೊಂದು ದಿನ ವಿಡಿಯೋ ಕಾಲ್ ಮಾಡಿದ್ದು ಆ ಬಳಿಕ ಹಣಕ್ಕಾಗಿ ಬೇಡಿಕೆ ಇರಿಸಲಾಗಿತ್ತು.
ಯುವತಿಯ ಮಾತಿನಿಂದ ಬೆದರಿದ ಅಧಿಕಾರಿ ಮೊದಲಿಗೆ ಒಂದೆರಡು ಲಕ್ಷ ಹಣ ನೀಡಿದ್ದರೂ ಮತ್ತಷ್ಟು ಹಣಕ್ಕೆ ಬೇಡಿಕೆ ಬಂದಾಗ ಇಲ್ಲಿನ ಮಾಳೂರು ಠಾಣಾ ಪೊಲೀಸರ ಮೊರೆ ಹೋಗಿದ್ದರು.ಕೂಡಲೇ ಫೀಲ್ಡ್ ಗಿಳಿದ ಪೊಲೀಸರ ತಂಡ ಗ್ಯಾಂಗ್ ನ ಪ್ರಮುಖ ಆರೋಪಿಗಳ ಹೆಡೆಮುರಿಕಟ್ಟಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಪ್ರಸಿದ್ಧ ವ್ಯಕ್ತಿಗಳೇ ಟಾರ್ಗೆಟ್
ಇದೇ ಗ್ಯಾಂಗ್ ತೀರ್ಥಹಳ್ಳಿಯಲ್ಲಿ ಈ ಮೊದಲು ಹಲವು ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿರುವ ಗುಸುಗುಸು ಸುದ್ದಿಯಾಗಿದೆ.ಅಧಿಕಾರಿಗಳು, ಪ್ರಸಿದ್ಧ ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿಕೊಂಡಿರುವ ಗ್ಯಾಂಗ್ ಒಂದೆರಡು ದಿನಗಳ ಪ್ಲಾನ್ ನಡೆಸಿ ಆಟ ಶುರುಮಾಡುತ್ತಾರೆ.
ಗ್ಯಾಂಗ್ ನಲ್ಲಿರುವ ಯುವಕರು ಪ್ರಸಿದ್ಧ ವ್ಯಕ್ತಿಗಳ ಪರಿಚಯ ಬೆಳೆಸಿಕೊಂಡ ಬಳಿಕ ಯುವತಿಯನ್ನು ಪರಿಚಯಿಸುತ್ತಾರಂತೆ. ಆಕೆಗೆ ಮೊಬೈಲ್ ನಂಬರ್ ಸಿಗುತ್ತಿದ್ದಂತೆ ಕರೆ ಮಾಡಿ ಮಾತಿನಲ್ಲೇ ಬುಟ್ಟಿಗೆ ಹಾಕಿಕೊಳ್ಳುತ್ತಾಳಂತೆ. ಆಕೆಯ ಚಂದದ ಮಾತಿಗೆ ಮರುಳಾಗುವ ವ್ಯಕ್ತಿಗಳು ವಿಡಿಯೋ ಕಾಲ್ ಗೂ ಓಕೆ ಎಂದ ಕೂಡಲೇ ಯುವತಿ ಬೆತ್ತಲಾಗುತ್ತಾಳೆ ಎನ್ನಲಾಗಿದೆ.
ಈ ದೃಶ್ಯಗಳನ್ನು ಸ್ಕ್ರೀನ್ ರೆಕಾರ್ಡ್ ಮಾಡಿಕೊಳ್ಳುವ ಗ್ಯಾಂಗ್ ವಿಡಿಯೋ ಕಾಲ್ ಕಡಿತಗೊಳ್ಳುತ್ತಲೇ ವೈರಲ್ ಮಾಡುವ ಬೆದರಿಕೆ ಒಡ್ಡಿ ಹಣಕ್ಕಾಗಿ ಬೇಡಿಕೆ ಇರುಸುತ್ತಾರೆ. ಮರ್ಯಾದಿಗೆ ಅಂಜಿ ಈಗಾಗಲೇ ಹಲವರು ಹಣ ಕೊಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಆಕೆಯಿಂದ ಈ ಮೊದಲು ವಂಚನೆಗೊಳಗಾದ ವ್ಯಕ್ತಿಗಳು ಠಾಣೆಗೆ ದೂರು ನೀಡಿದಲ್ಲಿ ದೂರು ದಾಖಳಿಸಿಕೊಳ್ಳಲಾಗುವುದು ಎಂದು ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಬಿಎಸ್‌ಎಫ್‌ನಲ್ಲಿ ಗ್ರೂಪ್ ಬಿ ಹಾಗೂ ಸಿ ವಿಭಾಗಗಳ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆ
