Bengaluru: ಕಂಪನಿಗಳು ಉದ್ಯೋಗಿಗಳನ್ನು ಕೆಲವೊಂದು ಕಾರಣಗಳಿಗೆ ವಜಾ ಮಾಡುತ್ತಾರೆ. ವಜಾಗೊಂಡ ನೌಕರರು ಬೇರೆ ಕೆಲಸವನ್ನು ಹುಡುಕುತ್ತಾರೆ. ಆದರೆ ಇಲ್ಲೊಂದು ಕಂಪನಿಯು ತಾನು ವಜಾಮಾಡಿದ ಸಿಬ್ಬಂದಿಗಳಿಗೆ ಹೊಸ ಉದ್ಯೋಗವನ್ನು ಹುಡುಕಲು ಮುಂದಾಗಿದೆ. ಅಷ್ಟಕ್ಕೂ ಕಂಪನಿಯು ವಜಾಗೊಳಿಸಿದ ಸಿಬ್ಬಂದಿಗಳಿಗೆ ಹೊಸ ಉದ್ಯೋಗವನ್ನು ಹುಡುಕಿಕೊಡಲು ತಾನೇಕೆ ಸಹಾಯ ಮಾಡುತ್ತಿದೆ ಗೊತ್ತಾ? ಇಲ್ಲಿದೆ ಕಂಪ್ಲೀಟ್ ಸ್ಟೋರಿ.
ಬೆಂಗಳೂರು(Bengaluru) ಮೂಲದ ಸ್ಟಾರ್ಟ್ ಅಪ್ ಫ್ಯಾಮ್ ಕಂಪನಿಯೊಂದು 18 ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಕಂಪನಿಯ ಇಬ್ಬರು ಸಂಸ್ಥಾಪಕರಾದ ಸಂಭವ್ ಜೈನ್ ಮತ್ತು ಕುಶ್ ತನೇಜಾ ಅವರು ತಮ್ಮ ಕಂಪನಿಯಲ್ಲಿ ಅತಿ-ಬೆಳವಣಿಗೆಯಿಂದ ಸುಸ್ಥಿರತೆಯತ್ತ ಗಮನ ಹರಿಸುವುದನ್ನು ಉಲ್ಲೇಖಿಸಿ ವಜಾಗೊಳಿಸುವುದಾಗಿ ಘೋಷಿಸಿದ್ದಾರೆ. ವಜಾ ಮಾಡಿದ ಸಿಬ್ಬಂದಿಗೆ ಹೊಸ ಉದ್ಯೋಗಗಳನ್ನು ಹುಡುಕಲು ಸಹಾಯ ಮಾಡುತ್ತೇವೆಂದು ಕಂಪನಿಯ ಸಹ-ಸಂಸ್ಥಾಪಕರು ಹೇಳಿದ್ದಾರೆ.
ತಮ್ಮ ಕಂಪನಿಯಿಂದ ವಜಾಗೊಂಡ ಸಿಬ್ಬಂದಿಗೆ ಹೊಸ ನೌಕರಿ ನೀಡುವುದಾದರೆ ತಮ್ಮನ್ನು ಸಂಪರ್ಕಿಸಬೇಕೆಂದು ಜೈನ್ ಟ್ವಿಟ್ ಮಾಡಿ ಕಂಪನಿಗಳಿಗೆ ಮನವಿ ಮಾಡಿಕೊಂಡಿದ್ದಾರೆ. ಇನ್ನೊಬ್ಬ ಸಹ-ಸಂಸ್ಥಾಪಕರಾದ ಕುಶ್ ತನೇಜಾ ಅವರು ಈ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಂಭವ್ ಜೈನ್,” ಸಂಸ್ಥಾಪಕರಾಗಿ ಮಾಡಲು ಅತ್ಯಂತ ಕಷ್ಟಕರವಾದ ಕೆಲಸವೆಂದರೆ ಜನರನ್ನು ಹೋಗಲು ಬಿಡುವುದು. ಇಂದು ನಾವು 18 ಫ್ಯಾಮ್ ಸದಸ್ಯರನ್ನು ವಜಾಗೊಳಿಸುವುದರಿಂದ ಕಠಿಣ ದಿನವಾಗಿತ್ತು. ವಜಾಗೊಂಡ ಉದ್ಯೋಗಿಗಳೆಲ್ಲರೂ ಭಾವನಾತ್ಮಕವಾಗಿ ನಮ್ಮ ಜೊತೆ ಸಂಪರ್ಕ ಹೊಂದಿದ್ದಾರೆ” ಎಂದು ಜೈನ್ ಹೇಳಿದ್ದಾರೆ.
ಫ್ಯಾಮ್ ಅನ್ನು ಅಭಿವೃದ್ಧಿಪಡಿಸುವುದರ ಹೊರತಾಗಿ, ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವಲ್ಲಿ ಉದ್ಯೋಗಿಗಳು ಬಹಳಷ್ಟು ಶ್ರಮ ಪಟ್ಟಿದ್ದಾರೆ ಹಾಗೂ ಇವರು ಬೆಂಬಲವಾಗಿ ನಿಂತಿದ್ದಾರೆ. ಇವರ ಕೊಡುಗೆ ಅಗಾಧನೀಯ. ಅವರ ವೈಯಕ್ತಿಕ ಬೆಳವಣಿಗೆಯನ್ನು ಹೆಚ್ಚಿಸಲು ಆಗಲಿಲ್ಲ ಎಂಬ ಕೊರಗು ನನಗಿದೆ ಎಂದು ಹೇಳಿಕೊಂಡಿದ್ದಾರೆ.
ನಮಗೆ ಅವರ ಬಗ್ಗೆ ಎಲ್ಲಾ ಸಹಾನುಭೂತಿ ಇದೆ ಮತ್ತು ಈ ಜನರು ಅವರು ಹೋದಲ್ಲೆಲ್ಲಾ ಅದ್ಭುತವಾದ ವಸ್ತುಗಳನ್ನು ನಿರ್ಮಿಸುತ್ತಾರೆ ಎಂಬ ವಿಶ್ವಾಸವಿದೆ ಮತ್ತು ಎಲ್ಲರಿಗೂ ಜೀವನದಲ್ಲಿ ಉತ್ತಮವಾಗಲಿ ಎಂದು ಹಾರೈಸುತ್ತೇವೆ. ಎಂದು ಸಿಬ್ಬಂದಿಗೆ ಸಂಭವ್ ಜೈನ್ ಶುಭ ಹಾರೈಸಿದ್ದಾರೆ.
