Bengaluru: ಬೆಂಗಳೂರು: ಕರ್ನಾಟಕದ ಜನತೆಗೆ ಐದು ಗ್ಯಾರಂಟಿಯನ್ನು ಘೋಷಣೆ ಮಾಡುವ ಮೂಲಕ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿ ಅಧಿಕಾರದ ಗದ್ದುಗೆ ಹಿಡಿದ್ದ ಕಾಂಗ್ರೆಸ್ ಈಗ ಚುನಾವಣಾ ಪೂರ್ವ ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳ ಜಾರಿಗೆ ಮುಂದಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಲವು ಕ್ಯಾಂಪೇನ್ ಹಾಗೂ ತಂತ್ರಗಾರಿಕೆಗಳ ಜೊತೆಗೆ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು. ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಯುವನಿಧಿ, ಶಕ್ತಿ ಹಾಗೂ ಅನ್ನಭಾಗ್ಯ. ಈ ಐದು ಗ್ಯಾರಂಟಿಗಳು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕೈಹಿಡಿದಿದ್ದು ಗೊತ್ತೇ ಇದೆ. ಅದರಲ್ಲಿ ಶಕ್ತಿ ಯೋಜನೆ, ಗೃಹ ಜ್ಯೋತಿ, ಗೃಹ ಲಕ್ಷ್ಮಿ ಯೋಜನೆ ಜಾರಿಗೆ ತಂದಿದ್ದು, ಪಂಚ ಗ್ಯಾರೆಂಟಿಗಳನ್ನು ಜಾರಿಗೆ ತರಲು ಕೈ ಪಾಳಯ ಹರಸಾಹಸ ಪಡುತ್ತಿದೆ.ಕಾಂಗ್ರೆಸ್ ಸರ್ಕಾರದ (Congress Govt)ಸಿಎಂ ಸಿದ್ದರಾಮಯ್ಯನವರ (Siddaramaiah) ಬಹು ಮಹತ್ವಾಕಾಂಕ್ಷೆಯ ಅನ್ನಭಾಗ್ಯ ಯೋಜನೆ (Annabhagya Scheme) ಜಾರಿ ಮಾಡುವುದಾಗಿ ಘೋಷಣೆ ಮಾಡಿದ ವೇಳೆ ಪಡಿತರ ಕಾರ್ಡ್ ಹೊಂದಿದ ಕುಟುಂಬಕ್ಕೆ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಜುಲೈನಿಂದ ನೀಡುವ ಭರವಸೆ ನೀಡಿದ್ದರು.
ರಾಜ್ಯ ಸರ್ಕಾರ 10 ಕೆ.ಜಿ ಅಕ್ಕಿ(Rice) ನೀಡಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಿಲ್ಲ. ಹೀಗಾಗಿ, ಕೇಂದ್ರದ ಕಡೆಯಿಂದ 5 ಕೆಜಿ ಅಕ್ಕಿ ಜೊತೆಗೆ ರಾಜ್ಯ ಸರ್ಕಾರದ ಸಲುವಾಗಿ 5 ಕೆಜಿ ಅಕ್ಕಿ ಬದಲಿಗೆ ಹಣವನ್ನ ಖಾತೆಗೆ ಹಾಕಲು ಸರ್ಕಾರ ತೀರ್ಮಾನ ಕೈಗೊಂಡಿದೆ. ಆದ್ರೆ, ಸರ್ಕಾರದ ಈ ನಡೆಗೆ ನ್ಯಾಯಬೆಲೆ ವರ್ತಕರು (Fair Price Shop) ಅಸಮಾಧಾನ ಹೊರ ಹಾಕುತ್ತಿದ್ದಾರೆ. ಸರ್ಕಾರ ನೇರವಾಗಿ ಖಾತೆದಾರರ ಹೆಸರಿಗೆ ಹಣ ಹಾಕಿದರೆ ನ್ಯಾಯಬೆಲೆ ವರ್ತಕರ ಜೇಬಿಗೆ ಕತ್ತರಿ ಬೀಳೋದು ಫಿಕ್ಸ್. 10 ಕೆಜಿ ಅಕ್ಕಿ ನೀಡಿದರೆ ನ್ಯಾಯಬೆಲೆ ವರ್ತಕರಿಗೆ ಕಮಿಷನ್ ಹೆಚ್ಚು ಸಿಗುತ್ತೆ.
ಈಗ 5 ಕೆಜಿ ಅಕ್ಕಿ ನೀಡಿದರೆ ಕಮಿಷನ್ ಸಿಗುವುದಿಲ್ಲ. ಹೀಗಾಗಿ, ಕಮಿಷನ್ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ರಾಜ್ಯದ ಒಟ್ಟು 20 ಸಾವಿರಕ್ಕೂ ಅಧಿಕ ಪಡಿತರ ವಿತರಕರು ಇಂದಿನಿಂದ ನ್ಯಾಯಬೆಲೆ ಅಂಗಡಿಯನ್ನು ಬಂದ್ ಮಾಡಿ ರೇಷನ್ ವಿಲೇವಾರಿ ಮಾಡದಿರಲು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.
ಸರ್ಕಾರ ತಮ್ಮೊಂದಿಗೆ ಚರ್ಚೆ ನಡೆಸಿ ಖಾತೆಗೆ ಹಣ ಹಾಕುವ ಬದಲು 10 ಕೆ.ಜಿಗೆ ಬೇರೆ ದವಸಗಳನ್ನ ನೀಡಿ, ಇಲ್ಲವೇ ಪಡಿತರ ದಾರರ ಖಾತೆಗೆ ಹಣ ಹಾಕಿದರೆ ನಮಗೆ 10 ಕೆ.ಜಿಯ ಕಮಿಷನ್ ನೀಡಬೇಕೆಂದು ಬೇಡಿಕೆ ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ವಿತರಕರ ಬೇಡಿಕೆ ಸರ್ಕಾರದ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಲೋಕಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇದೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಹೇಗಾದರೂ ಮಾಡಿ ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದಲ್ಲಿದೆ. ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವಿಗೆ ಒಂದು ಕಾರಣವಾಗಿದ್ದ, ಐದು ಗ್ಯಾರಂಟಿಗಳನ್ನು ಲೋಕಸಭಾ ಚುನಾವಣೆಯಲ್ಲೂ ಪ್ರಯೋಗ ಮಾಡಲು ನಿರ್ಧಾರ ಮಾಡಿದೆ.
