Copra: ಕೊಬ್ಬರಿ (Copra) ಬೆಳೆಗಾರರಿಗೆ ಬಂಪರ್ ಸಿಹಿಸುದ್ದಿ ಇಲ್ಲಿದೆ. ಸರ್ಕಾರ ಕೊಬ್ಬರಿಗೆ ಬೆಂಬಲ ಬೆಲೆ ಘೋಷಿಸಿದೆ. ಹೌದು, ರಾಜ್ಯ ಸರ್ಕಾರ ಪ್ರತಿ ಕ್ವಿಂಟಲ್ ಉಂಡೆ ಕೊಬ್ಬರಿಗೆ 1,250 ರೂಪಾಯಿ ಬೆಂಬಲ ಬೆಲೆ ನೀಡುವುದಾಗಿ ಘೋಷಣೆ ಮಾಡಿದೆ. ಇಂದಿನಿಂದಲೇ ಜಾರಿಯಾಗಲಿದೆ.
ಈ ಬಗ್ಗೆ ಮಾತನಾಡಿದ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು, ಇಂದಿನಿಂದ ಕೊಬ್ಬರಿ ಖರೀದಿಗೆ 1,250 ರೂ.ಪ್ರೋತ್ಸಾಹ ಧನ ನೀಡಲಾಗುವುದು. ಆದರೆ, ಈ ಹಿಂದೆ ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಮಾರಾಟ ಮಾಡಿದವರಿಗೆ ಇದು ಅನ್ವಯವಾಗುವುದಿಲ್ಲ ಎಂದು ಹೇಳಿದರು.
ವಿವಿಧ ಮಾರುಕಟ್ಟೆಗಳಲ್ಲಿ ಪ್ರತಿ ಕ್ವಿಂಟಾಲ್ ಕೊಬ್ಬರಿಗೆ 7,700 ರಿಂದ 8,020 ರೂ.ವರೆಗೆ ಮಾರಾಟವಾಗುತ್ತಿದೆ. ರಾಜ್ಯಸರ್ಕಾರವು ಕೊಬ್ಬರಿ ಖರೀದಿ ಪ್ರಮಾಣ ಹೆಚ್ಚಳ ಹಾಗೂ ಖರೀದಿ ಅವ ವಿಸ್ತರಣೆಗೆ ಕೇಂದ್ರ ಸರ್ಕಾರವನ್ನು ಕೋರಿದೆ. ಇದಕ್ಕೆ ಅನುಮತಿ ಸಿಕ್ಕ ಬಳಿಕ ನೋಂದಾಯಿಸುವವರಿಗೂ ಪ್ರೋತ್ಸಾಹ ಧನ ದೊರೆಯಲಿದೆ ಎಂದು ಹೇಳಿದರು.
ಎಂಎಸ್ಸಿ ಅಡಿ ಕೊಬ್ಬರಿ ಖರೀದಿಗೆ 37,632 ರೈತರು ನೋಂದಣಿ ಮಾಡಿಕೊಂಡಿದ್ದಾರೆ. ನಿನ್ನೆಯವರೆಗೆ 31,641 ರೈತರು ಪ್ರಯೋಜನ ಪಡೆದಿದ್ದಾರೆ. ನಿನ್ನೆಯವರೆಗೆ ಕೇಂದ್ರ ಸರ್ಕಾರದ ಏಜೆನ್ಸಿ ನ್ಯಾಪೆಡ್ ಮೂಲಕ ರಾಜ್ಯ ಏಜೆನ್ಸಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಮೂಲಕ 45,038 ಮೆಟ್ರಿಕ್ ಟನ್ ಉಂಡೆ ಕೊಬ್ಬರಿ ಖರೀದಿಸಲಾಗಿದೆ. ಜುಲೈ 26ರವರೆಗೂ ಖರೀದಿ ಪ್ರಕ್ರಿಯೆ ಚಾಲನೆಯಲ್ಲಿರುತ್ತದೆ ಎಂದು ಹೇಳಿದರು.
