Government Subsidy: ರಾಜ್ಯದ ರೈತರಿಗೆ ಮಹತ್ವದ ಮಾಹಿತಿಯೊಂದನ್ನು ರಾಜ್ಯ ಸರ್ಕಾರ ನೀಡಿದೆ. ಹೌದು, 2023ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಉಂಟಾಗುವ ಬೆಳೆ ಹಾನಿ ಸಬ್ಸಿಡಿಯನ್ನು (Government Subsidy) ಹೆಚ್ಚಳ ಮಾಡುವುದಾಗಿ ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಈಗಾಗಲೇ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ಅತಿವೃಷ್ಟಿ ಹಾಗೂ ಪ್ರವಾಹ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ರೈತರು ಬೆಳೆದ ಬೆಳೆ ನಾಶವಾಗಿದೆ. ಆದ್ದರಿಂದ ರಾಜ್ಯ ಸರ್ಕಾರ, 2023ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಉಂಟಾಗುವ ಬೆಳೆ ಹಾನಿಗೆ ನೀಡುವ ಸಬ್ಸಿಡಿಯಲ್ಲಿ ಹೆಚ್ಚಳ ಮಾಡಿದೆ.
ಈ ನಿಟ್ಟಿನಲ್ಲಿ ಅರ್ಹ ರೈತರಿಗೆ ಗರಿಷ್ಠ ಎರಡು ಹೆಕ್ಟೇರ್ ಗೆ ಸೀಮಿತವಾಗಿ ಇನ್ಪುಟ್ ಸಬ್ಸಿಡಿ ಹೆಚ್ಚಳ ಮಾಡಿ ಆದೇಶ ಹೊರಡಿಸಲಾಗಿದ್ದು, ಇದರ ಅನುಸಾರ ಮಳೆಯಾಶ್ರಿತ ನೀರಾವರಿ ಹಾಗೂ ಬಹು ವಾರ್ಷಿಕ ಬೆಳೆ ನಷ್ಟಕ್ಕೆ ಈ ಹೆಚ್ಚುವರಿ ಸಬ್ಸಿಡಿ ಅನ್ವಯವಾಗಲಿದೆ.
ಸದ್ಯ ಮಳೆಯಾಶ್ರಿತ ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ ಗೆ 5,100 ರೂಪಾಯಿ, ನೀರಾವರಿ ಬೆಳೆ ನಷ್ಟಕ್ಕೆ 8,000 ರೂಪಾಯಿ ಹಾಗೂ ಬಹುವಾರ್ಷಿಕ ಬೆಳೆ ನಷ್ಟಕ್ಕೆ 5,500 ರೂಪಾಯಿ ಇನ್ಪುಟ್ ಸಬ್ಸಿಡಿಯನ್ನು ಹೆಚ್ಚಳ ಮಾಡಲಾಗಿದೆ.
ಸದ್ಯ ಅರ್ಹ ರೈತರು ಎಸ್ ಡಿ ಆರ್ ಎಫ್ / ಎನ್ ಡಿ ಆರ್ ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚುವರಿ ಮೊತ್ತ ಪಡೆಯಲು ಕೆಲವು ಷರತ್ತನ್ನು ವಿಧಿಸಲಾಗಿದೆ.
ಮುಖ್ಯವಾಗಿ ಮುಂಗಾರು ಹಂಗಾಮು (ಜೂ.1ರಿಂದ ಸೆ.30ರವರೆಗೆ) ಹಾಗೂ ಹಿಂಗಾರು ಹಂಗಾಮಿನಲ್ಲಿ (ಅ.1ರಿಂದ ಡಿ. 31ರವರೆಗೆ) ಪ್ರವಾಹದಿಂದ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಅರ್ಹ ರೈತರಿಗೆ ಗರಿಷ್ಠ 2 ಹೆಕ್ಟೇರ್‌ಗೆ ಶೇ. 33ಕ್ಕಿಂತ ಹೆಚ್ಚು ಬೆಳೆ ಹಾನಿಯಾಗಿದ್ದರೆ ಇನ್‌ಪುಟ್ ಸಬ್ಸಿಡಿ ನೀಡಲಾಗುವುದು.
