ITR Filing: ರೈತ ದೇಶದ ಬೆನ್ನೆಲುಬು. ಸದ್ಯದ ಪರಿಸ್ಥಿತಿಯಲ್ಲಿ ದೇಶಾದ್ಯಂತ ತರಕಾರಿಗಳ ಬೆಲೆ ಏರಿದೆ. ಆದರೆ ಇದು ತಟಸ್ಥವಾಗಿರುವುದಿಲ್ಲ ಮತ್ತೆ ಇಳಿಕೆ ಕಂಡು ಬರುತ್ತದೆ, ಇದೇ ರೈತರ ಬಾಳು. ತಾವು ಬೆಳೆದ ಬೆಳೆಗೆ ಕೆಲವೊಂದು ಬಾರಿ ಅತಿ ಹೆಚ್ಚು ಲಾಭ ಯಗಳಿಸುತ್ತಾರೆಯಾದರು ಮತ್ತೆ ಅದೇ ಬೆಳೆಯಿಂದಾಗಿ ತಾವು ನಷ್ಟ ಹೊಂದುತ್ತಾರೆ. ನಿರ್ದಿಷ್ಟ ಆದಾಯದ ಭದ್ರತೆಯೇ ರೈತನಿಗಿಲ್ಲ.
ಆದರೆ ಇದೀಗ ರೈತನೂ ತೆರಿಗೆ ಕಟ್ಟಬೇಕು, ರೈತನೂ ಐಟಿ ರಿಟರ್ನ್ಸ್(ITR Filing) ಹಾಕ್ಬೇಕು ಅನ್ನೋ ಚರ್ಚೆ ಶುರುವಾಗಿದೆ. ಆದರೆ, ಭಾರತದಂತಹ ರಾಷ್ಟ್ರದಲ್ಲಿ ಅದು ಕಾನೂನಾತ್ಮಕವಾಗಿಯೂ ಸಾಧ್ಯವಿಲ್ಲ. ರೈತರ ಆದಾಯದ ಮೇಲೆ ಸಂಪೂರ್ಣ ವಿನಾಯ್ತಿ ಇರೋದು ಭಾರತದಂತಹ ಕೆಲವೇ ಕೆಲವು ಬೆರಳೆಣಿಕೆಯ ರಾಷ್ಟ್ರಗಳಲ್ಲಿ. ನಮ್ಮ ಭಾರತದಲ್ಲಿ ಕೃಷಿ ಆದಾಯದ ಮೇಲೆ ತೆರಿಗೆ ವಿಧಿಸಲು ಸಾಧ್ಯವಿಲ್ಲ. ವಿನಾಯಿತಿ ಷರತ್ತನ್ನು ಭಾರತದ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 (1) ಅಡಿಯಲ್ಲಿ ಉಲ್ಲೇಖಿಸಲಾಗಿದೆ.
ಆದರೆ ರಾಜ್ಯ ಸರ್ಕಾರಗಳು ಕೃಷಿ ತೆರಿಗೆ ವಿಧಿಸಬಹುದು. ಇತ್ತೀಚಿನ ತಿದ್ದುಪಡಿಯಂತೆ, ಒಂದು ಹಣಕಾಸು ವರ್ಷದಲ್ಲಿ ಆದಾಯವು5,000 ರೂ.ಗಿಂತ ಒಳಗಿದ್ದರೆ, ಕೃಷಿಯಿಂದ ಬರುವ ಆದಾಯವನ್ನು ತೆರಿಗೆ ಉದ್ದೇಶಗಳಿಗಾಗಿ ಲೆಕ್ಕ ಹಾಕಲಾಗುವುದಿಲ್ಲ. ಅದಕ್ಕಿಂತ ಹೆಚ್ಚಿದ್ದರೆ ತೆರಿಗೆ ವಿಧಿಸಲಾಗುತ್ತದೆ. ಹಣಕಾಸು ಕಾಯಿದೆಯ ಪ್ರಕಾರ, ಒಬ್ಬ ವ್ಯಕ್ತಿಯ ಒಟ್ಟು ತೆರಿಗೆ ಹೊಣೆಗಾರಿಕೆಯು ಕೃಷಿಯೇತರ ಭಾಗಕ್ಕೆ ಸೇರಿಸಿದ ಕೃಷಿ ಆದಾಯವನ್ನು ಒಳಗೊಂಡಿರುತ್ತದೆ.
ಕೃಷಿ ಅವಲಂಬಿತ ಆದಾಯದ ಮೇಲೆ ತೆರಿಗೆ ಇದ್ದೇ ಇದೆ. ಕೋಳಿ ಸಾಕಣೆ, ಜೇನು ಸಾಕಣೆ, ವಾಣಿಜ್ಯ ಮರಗಳ ಮಾರಾಟ, ಹೈನುಗಾರಿಕೆ, ಕೃಷಿ ಭೂಮಿಯಲ್ಲಿ ಶೂಟಿಂಗ್, ಜಾಹೀರಾತು ಫಲಕ ಅಳವಡಿಕೆಯಂಥಾ ಮೂಲದಿಂದ ಬಂದ ಆದಾಯಕ್ಕೆ ತೆರಿಗೆ ಇದ್ದೇ ಇದೆ.
ಕೃಷಿ ಮಾಡೋರಿಗೆ ಆದಾಯ ತೆರಿಗೆ ಬರೆ ಏಕೆ ಅನ್ನೋದು ರೈತಾಪಿ ವರ್ಗದ ವಾದ. ಕೆಲವೊಮ್ಮೆ ಮಳೆ ಬರಲ್ಲ, ಮಳೆ ಬಂದು ಬೆಳೆದರೂ ಕೈಗೆ ಸಿಗಲ್ಲ. ಅಥವಾ ಜೋರಾದ ಮಳೆ ಬಂದು ಪ್ರವಾಹಕ್ಕೆ ಬೆಳೆ ನಾಶವಾಗುತ್ತದೆ. ಇನ್ನೂ ಕೆಲವೊಮ್ಮೆ ಮಳೆ ಬೆಳೆ ಸರಿಯಾಗಿದ್ದರೂ ಕೀಟಭಾದೆ ಮುಗಿಯದ ಸಮಸ್ಯೆ. ಇವೆಲ್ಲೆವನ್ನೂ ಮೀರಿ ದೊಡ್ಡ ಸಮಸ್ಯೆ ಎಂದರೆ, ಮಧ್ಯವರ್ತಿಗಳ ಹಾವಳಿಯಿಂದಾಗಿ, ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದಿರುವುದು. ಬೆಳೆಗಾಗಿ ಮಾಡಿದ ಸಾಲ ತೀರಿಸಲು ಒದ್ದಾಡುತ್ತಿರುವ ರೈತಾಪಿ ವರ್ಗಕ್ಕೆ, ಆದಾಯವಾದರೂ ಉಂಟಾ? ನಿರ್ದಿಷ್ಟ ಆದಾಯವಿಲ್ಲದ ಮೇಲೆ ತೆರಿಗೆ ಕಟ್ಟಲು ಸಾಧ್ಯವೇ?
ಆದರೆ ರೈತರ ಆದಾಯಕ್ಕೆ ತೆರಿಗೆ ಇಲ್ಲ ಅನ್ನೋದೇ ಕೆಲ ಬಂಡವಾಳಶಾಹಿಗಳಿಗೆ ದೊಡ್ಡ ವರದಾನವಾಗಿದೆ. ಯಾವುದು ಮೂಲದಿಂದ ಗಳಿಸಿದ ಆದಾಯವನ್ನು ಕೃಷಿ ಆದಾಯದೊಂದಿಗೆ ಹೋಲಿಸಿ ತೆರಿಗೆ ವಂಚನೆ ಮಾಡೋ ಅದೆಷ್ಟೋ ಜನರು ಈ ಸಮಾಜದಲ್ಲಿದ್ದಾರೆ. ಆದರೆ, ದಿನವಿಡೀ ಭೂಮಿಯಲ್ಲಿ ಬೆವರು ಸುರಿಸಿ ದುಡಿಯೋ ರೈತನಿಗೆ ಈ ವಂಚನೆಗಳೆಲ್ಲವೂ ಗೊತ್ತೇ ಇಲ್ಲ.
ರೈತರು ತೆರಿಗೆ ಪಾವತಿಸುವುದರಿಂದ ದೇಶದ ಜಿಡಿಪಿ ಅಭಿವೃದ್ಧಿಗೆ ಪೂರಕವಾಗಿಯೂ ರೈತರ ಆದಾಯ ಹೆಚ್ಚಿನ ಸಾತ್ ನೀಡಲಿದೆ. ಕೆಲ ರೈತರು ತೆರಿಗೆ ಪಾವತಿಸಿ ರಿಟರ್ನ್ಸ್ ಪಡೆಯುತ್ತಿದ್ದಾರೆ. ಇದಕ್ಕಾಗಿ ಆದಾಯ ತೆರಿಗೆ ಇಲಾಖೆಯು ಅವಕಾಶವನ್ನು ಕಲ್ಪಿಸಿದೆ. ಅಲ್ಲದೆ, ತೆರಿಗೆ ಕಟ್ಟೋದು, ಐಟಿ ರಿಟರ್ನ್ಸ್ ಸಲ್ಲಿಸೋದ್ರಿಂದ ಭೂಮಿಯ ಮೇಲಿನ ಒಡೆತನ, ಭೂಮಿ ಮೇಲಿನ ಹಕ್ಕು ಭದ್ರಗೊಳ್ಳಲಿದೆ
