ಕಡಬ : ಕಡಬ ತಾಲೂಕಿನ ಇಚ್ಲಂಪಾಡಿ ಗ್ರಾಮದ ಕೊರಮೇರು ಭಾಗದಲ್ಲಿ ಶನಿವಾರ ರಾತ್ರಿ ಕಾಡಾನೆ ಕೃಷಿ ತೋಟಕ್ಕೆ ಲಗ್ಗೆ ಇಟ್ಟು ಕೃಷಿ ನಾಶಗೊಳಿಸಿವೆ.
ಇಚ್ಲಂಪಾಡಿ ಗ್ರಾಮದ ಕೊರಮೇರು ನಿವಾಸಿ ಕೆ.ರಮೇಶ್ ಗೌಡ, ಕುಶಾಲಪ್ಪ ಗೌಡ ದೇಸಾಲು, ಹೊನ್ನಪ್ಪ ಗೌಡ ದೇಸಾಲು ಅವರ ತೋಟಕ್ಕೆ ದಾಳಿ ಮಾಡಿರುವ ಕಾಡಾನೆ ಅಡಿಕೆ ಗಿಡ, ಬಾಳೆ ಗಿಡಗಳನ್ನು ಹಾನಿಗೊಳಿಸಿವೆ.
ಬಿಜೇರು ನಿವಾಸಿ ದಯಾನಂದ ಆಚಾರ್ಯ ಅವರ ಕೃಷಿ ತೋಟಕ್ಕೆ ನುಗ್ಗಿರುವ ಕಾಡಾನೆ ನೇಂದ್ರ ಬಾಳೆಗಿಡ ಹಾನಿಗೊಳಿಸಿದೆ ಮಾತ್ರವಲ್ಲದೇ ಬಿಂದು ಸಂತೋಷ್ ಅವರ ನಿರ್ಮಾಣ ಹಂತದ ಮನೆಯ ಸುತ್ತಲಿನ ತಡೆಗೋಡೆಯನ್ನು ಕೆಡವಿ ಹಾಕಿವೆ. ಅಲ್ಲದೇ ಅವರ ನಿರ್ಮಾಣ ಹಂತದ ಮನೆಯ ಮೆಟ್ಟಿಲನ್ನೂ ಹಾನಿಗೊಳಿಸಿವೆ. ಘಟನೆಯಿಂದ ಅಂದಾಜು 3 ಲಕ್ಷ ರೂ.ನಷ್ಟ ಸಂಭವಿಸಿದೆ. ಆನೆ ದಾಳಿ ಬಗ್ಗೆ ಎರಡೂ ಮನೆಯವರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದಾರೆ.
ಘಟನೆಯಿಂದ ಸಾವಿರಾರು ರೂ.ನಷ್ಟ ಸಂಭವಿಸಿದೆ.
ಮುಂದುವರಿದ ಆತಂಕ
ಅರಣ್ಯ ಭಾಗದಲ್ಲಿರುವ ಇಚ್ಲಂಪಾಡಿ ಗ್ರಾಮದಲ್ಲಿ ಪದೇ ಪದೇ ಆನೆ ದಾಳಿ ನಡೆಯುತ್ತಿದ್ದು ಅಪಾರ ಕೃಷಿ ಹಾನಿಯಾಗುತ್ತಿದೆ. ಗ್ರಾಮಸ್ಥರೂ ಆನೆ ದಾಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.ಕೆಲ ತಿಂಗಳ ಹಿಂದೆ ತಾಲೂಕಿನ ಕುಟ್ರುಪಾಡಿಯಲ್ಲಿ ಕಾಡಾನೆ ದಾಳಿ ಮಾಡಿ ಇಬ್ಬರನ್ನು ಹತ್ಯೆ ಮಾಡಿತ್ತು.
ಬಳಿಕ ಸಾರ್ವಜನಿಕರ ಒತ್ತಾಯಕ್ಕೆ ಮಣಿದು ಕಾರ್ಯಾಚರಣೆ ನಡೆಸಿ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಗಿತ್ತು.ಬಳಿಕ ಕಾರ್ಯಾಚರಣೆ ಮುಗಿಸಿ ತೆರಳಿದ್ದ ಸಾಕಾನೆಗಳ ತಂಡ ಮತ್ತೆ ಬರಲೇ ಇಲ್ಲ.
