Gruhalakshmi: ಈಗಾಗಲೇ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಅರ್ಜಿ ಸಲ್ಲಿಕೆ ಕ್ಷಣಗಣನೆ ಆರಂಭವಾಗಿದ್ದು, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬದ ಒಬ್ಬ ಮಹಿಳೆಗೆ ತಿಂಗಳಿಗೆ 2,000 ರೂಪಾಯಿ ನೀಡಲಾಗುತ್ತದೆ ಎಂದು ಸರ್ಕಾರ ಗ್ಯಾರಂಟಿ ನೀಡಿದೆ.
ಆದರೆ ಗೃಹಲಕ್ಷ್ಮಿ ಯೋಜನೆ ಶುರುವಾಗೋದು ಯಾವಾಗ? ಮಹಿಳೆಯರ ಖಾತೆಗೆ 2 ಸಾವಿರ ರೂಪಾಯಿ ಬರೋದು ಯಾವಾಗ? ಎಂಬ ಈ ಜನರ ಪ್ರಶ್ನೆಗೆ ಸ್ವತಃ ಸಿಎಂ ಸಿದ್ದರಾಮಯ್ಯ ಅವರೇ ಉತ್ತರ ನೀಡಿದ್ದಾರೆ.
ಹೌದು, ಹಾಸನದ ಬೂವನಹಳ್ಳಿಯಲ್ಲಿ ಮುಖ್ಯಮಂತ್ರಿ ಅವರು ಗೃಹಲಕ್ಷ್ಮಿ ಯೋಜನೆ ಬಗ್ಗೆ ಮಾಹಿತಿ ನೀಡಿದ್ದು, ನಾವು ಕೊಟ್ಟ ಗ್ಯಾರೆಂಟಿ ಗಳನ್ನ ಈಡೇರಿಸುತ್ತೇವೆ ಅಂತ ಹೇಳಿದ ಸಿಎಂ, ಜುಲೈ 1 ರಿಂದ ಗೃಹ ಜ್ಯೋತಿ ಯೋಜನೆ ಜಾರಿಗೆ ತರುತ್ತೇವೆ ಎಂದರು. ಇನ್ನು ಆಗಸ್ಟ್ 16ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಲಿದೆ ಅಂತ ಸ್ಪಷ್ಟಪಡಿಸಿದರು.
ಮುಖ್ಯವಾಗಿ ಪ್ರತಿ ಮನೆಯ ಯಜಮಾನಿ ಗೃಹಲಕ್ಷ್ಮಿ ಯೋಜನೆ ಅಡಿ 2 ಸಾವಿರ ರೂಪಾಯಿ ಪಡೆಯಬಹುದಾಗಿದೆ. ರಾಜ್ಯದ ಬಿಪಿಎಲ್ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬದ ಸ್ತ್ರೀಯರು ಅರ್ಜಿ ಸಲ್ಲಿಸಬಹುದು.
ವಿವಾಹಿತ ಮಹಿಳೆಯರು, ವಿಚ್ಛೇದಿತ ಮಹಿಳೆಯರು ಹಾಗೂ ನಿರ್ಗತಿಕ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಜೊತೆಗೆ ಲೈಂಗಿಕ ಅಲ್ಪಸಂಖ್ಯಾತರೂ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ಡೀಟೆಲ್ಸ್ ನೀಡಬೇಕು.
ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಮನೆಯ ಮಹಿಳೆಯರು ಒಬ್ಬಳು ಅರ್ಜಿ ಸಲ್ಲಿಸಬಹುದು. ಅತ್ತೆ ಖಾತೆಗೆ ಹಣ ಸೇರಬೇಕೋ ಅಥವಾ ಸೊಸೆ ಖಾತೆಗೆ ಹಣ ಸೇರಬೇಕೋ ಎನ್ನುವುದನ್ನು ಆ ಕುಟುಂಬಸ್ಥರೇ ನಿರ್ಧಾರ ಮಾಡಿ, ಸರ್ಕಾರಕ್ಕೆ ಮಾಹಿತಿ ನೀಡಬೇಕು ಅಂತ ತಿಳಿಸಲಾಗಿದೆ.
ಆನ್ ಲೈನ್ ಅಥವಾ ಆಫ್ ಲೈನ್ ಎರಡೂ ವಿಧಾನದಿಂದ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಮನೆ ಯಜಮಾನಿ ಕೆಲವು ಅಗತ್ಯ ಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು.
ಆಧಾರ್ ಕಾರ್ಡ್, ಬ್ಯಾಂಕ್ ಅಕೌಂಟ್ ನಂಬರ್, ಬ್ಯಾಂಕ್ ಪಾಸ್ಬುಕ್ಗಳನ್ನು ಅರ್ಜಿ ಜೊತೆ ಸಲ್ಲಿಸಬೇಕು. ಕುಟುಂಬದ ಎಪಿಎಲ್ ಅಥವಾ ಬಿಪಿಎಲ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಅರ್ಜಿ ಜೊತೆ ಲಗತ್ತಿಸಬೇಕು.
ಗೃಹಲಕ್ಷ್ಮಿ ಯೋಜನೆಗೆ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದರು. ಆದರೆ ಸರ್ಕಾರದ ನಿರ್ಧಾರದಂತೆ ನೋಂದಣಿ ಪ್ರಾರಂಭವಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಕಾರ್ಯ ಇಂದಿನಿಂದ ಆರಂಭವಾಗುವುದಿಲ್ಲ ಎನ್ನಲಾಗಿದೆ. ಬುಧವಾರ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿ, ಬಳಿಕ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬ ಬಗ್ಗೆ ಸರ್ಕಾರ ತೀರ್ಮಾನಿಸಲಿದೆ ಎಂದು ತಿಳಿಸಲಾಗಿದೆ.
ಇನ್ನು ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ಇರುವುದಿಲ್ಲ ಮತ್ತು ಶುಲ್ಕವೂ ಇರುವುದಿಲ್ಲ ಎಂದು ಕೂಡ ಮಾಹಿತಿ ನೀಡಲಾಗಿದೆ.
