ಮಂಗಳೂರು ನಗರದ ಆಸ್ಪತ್ರೆಯೊಂದರಲ್ಲಿ ರಿಸಪ್ಶನಿಸ್ಟ್ ಮಹಿಳೆಯ ಜೊತೆಗೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆಯೊಂದು ನಡೆದಿದೆ. ಅಷ್ಟು ಮಾತ್ರವಲ್ಲದೇ ಆಸ್ಪತ್ರೆ ಸೊತ್ತುಗಳನ್ನು ಹಾನಿ ಮಾಡಲಾಗಿದೆ ಎಂದು ವರದಿಯಾಗಿದೆ. ಈ ಘಟನೆ ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ನಡೆದಿದೆ.
ಕದ್ರಿ ವ್ಯಾಸನಗರ ನಿವಾಸಿ ಆಶೀಕ್ (32) ಎಂಬಾತನೇ ಆರೋಪಿ. ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.25 ರಂದು ಈ ಘಟನೆ ನಡೆದಿದ್ದು, ಸಂಜೆ ಆಶೀಕ್ ತನ್ನ ತಾಯಿಯನ್ನು ಚಿಕಿತ್ಸೆಗೆಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ಮಹಿಳೆ ರೋಗಿಯ ಮಾಹಿತಿಯನ್ನು ಕೇಳಿದ್ದಾರೆ.
ವೈಯಕ್ತಿಕ ವಿವರ ಕೇಳಿದ ನಂತರ, ಆರೋಪಿ ಆಶೀಕ್ ಕೋಪಗೊಂಡಿದ್ದಾಗಿಯೂ, ಮಹಿಳೆಯನ್ನು ಅವಾಚ್ಯವಾಗಿ ನಿಂದಿಸಿರುವುದಾಗಿಯೂ, ಅಲ್ಲದೆ ಅಲ್ಲಿ ದಾಂಧಲೆ ಮಾಡಿರುವುದಾಗಿ, ಮಹಿಳೆಯ ಮೈ ಕೈಯನ್ನು ಮುಟ್ಟಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಈ ಕುರಿತು ಮಹಿಳೆ ಕಂಕನಾಡಿ ಠಾಣೆಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಕೆಲಸವಿಲ್ಲದೆ ಮನೆಯಲ್ಲಿದ್ದು, ಮಾನಸಿಕ ತೊಂದರೆ ಎದುರಿಸುತ್ತಿರುವುದಾಗಿ, ಇದಕ್ಕೆ ಚಿಕಿತ್ಸೆ ಪಡೆಯುತ್ತಿರುವುದಾಗಿ ಮನೆಯವರು ತಿಳಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
