Oil For Skin: ಕೋಮಲವಾದ ತ್ವಚೆ ಹಾಗೂ ಸುಂದರವಾದ ಮುಖ ಹೊಂದುವುದು ಎಲ್ಲರಿಗೂ ಇಷ್ಟ. ಆದರೆ ಕೆಲವು ಪ್ರತಿಕೂಲ ಕಾರಣಗಳಿಂದ ಚರ್ಮದ ಸೌಂದರ್ಯ ಹಾಳಾಗುತ್ತದೆ. ಅಲ್ಲದೇ ವಯಸ್ಸಾದಂತೆ ಚರ್ಮವು ಸುಕ್ಕುಗಟ್ಟುತ್ತದೆ. ಚರ್ಮದ ಮೇಲೆ ಅಲ್ಲಲ್ಲಿ ಗುಳ್ಳೆಗಳು, ಕಲೆಗಳು, ಮೊಡವೆಗಳು, ಸುಕ್ಕುಗಳು, ಗೆರೆಗಳು ನಮ್ಮ ಮುಖದ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತವೆ. ಮಹಿಳೆಯರು ತಮ್ಮ ಮುಖಕ್ಕೆ ಮತ್ತೆ ತಾಜಾತನ ಬರಲೆಂದು ನೂರಾರು ಪ್ರಯೋಗಗಳನ್ನು ನಡೆಸುತ್ತಾರೆ. ಆದರೆ, ಯಾವುದೇ ಅಡ್ಡ ಪರಿಣಾಮಗಳಿಲ್ಲದೆ, ನಮ್ಮ ಮನೆಯಲ್ಲೇ ತಯಾರಿಸಬಹುದಾದ ಹಲವು ಪರಿಹಾರಗಳಿವೆ (Skin Care Tips). ವಿವಿಧ ಬಗೆಯ ಚರ್ಮಗಳಿಗೆ ಹೊಂದಿಕೆ ಆಗುವಂತಹ ಬಗೆ ಬಗೆಯ ಫೇಸ್ ಆಯಿಲ್ ಬಳಕೆಯಿಂದ(oil for skin) ನಮ್ಮ ಸೌಂದರ್ಯವನ್ನು ವೃದ್ಧಿಸಿಕೊಳ್ಳಬಹುದು.
ತೆಂಗಿನೆಣ್ಣೆ: ತೆಂಗಿನ ಎಣ್ಣೆಯು ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ, ಇದು ಸತ್ತ ಚರ್ಮವನ್ನು ತೆಗೆದುಹಾಕುವ ಮೂಲಕ ಬಣ್ಣವನ್ನು ಸುಧಾರಿಸುತ್ತದೆ. ಇದು ಚರ್ಮರೋಗ, ಎಸ್ಜಿಮಾ ಮತ್ತು ಚರ್ಮದ ಸುಟ್ಟಗಾಯಗಳಲ್ಲಿಯೂ ಸಾಕಷ್ಟು ಉಪಯುಕ್ತವಾಗಿದೆ. ರಾತ್ರಿ ಮಲಗುವ ಮುನ್ನ ಐದಾರು ಹನಿ ತೆಂಗಿನೆಣ್ಣೆಯನ್ನು ಮುಖಕ್ಕೆ ಹಾಕಿಕೊಂಡು ಸುಮಾರು ಐದರಿಂದ ಹತ್ತು ನಿಮಿಷಗಳ ಕಾಲ ಮೇಲ್ಮುಖವಾಗಿ ಮಸಾಜ್ ಮಾಡಿ ಹಾಗೆಯೇ ಮಲಗುವುದು ಒಳ್ಳೆಯದು.
ಬಾದಾಮಿ ಎಣ್ಣೆ: ಸ್ನಾನಕ್ಕೆ 20 ನಿಮಿಷಗಳಿಗೂ ಮುನ್ನ ಬಾದಾಮಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಿ. ಪ್ರತಿದಿನವೂ ಸಾಧ್ಯವಾದರೆ ಉತ್ತಮ. ಇಲ್ಲವಾದರೆ ಎರಡು ದಿನಗಳಿಗೊಮ್ಮೆಯೂ ಮಾಡಬಹುದು. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ ಹೇರಳವಾಗಿದ್ದು, ಇದು ಚರ್ಮವನ್ನು ಬಿಗಿಗೊಳಿಸುವಲ್ಲಿ ಪ್ರಯೋಜನಕಾರಿಯಾಗಿದೆ.
ಆಲಿವ್ ಹಾಗೂ ಆರ್ಗಾನ್ ಎಣ್ಣೆ: ಚರ್ಮದ ಆರೋಗ್ಯಕ್ಕೆ ಆಲಿವ್ ಹಾಗೂ ಆರ್ಗಾನ್ ಎರಡೂ ಎಣ್ಣೆಗಳು ಅತ್ಯುತ್ತಮ. ಸ್ನಾನದ ನಂತರ ಹಚ್ಚಿಕೊಳ್ಳುವ ಮಾಯ್‌ಶ್ಚರೈಸರ್ ಲೋಶನ್‌ಗೆ ಕೆಲವು ಹನಿ ಅರ್ಗಾನ್ ಎಣ್ಣೆ ಹಾಕಿ ಹಚ್ಚಿಕೊಳ್ಳಬಹುದು. ಅಥವಾ ಮೊದಲು ಮುಖವನ್ನು ಚೆನ್ನಾಗಿ ತಿಳಿದುಕೊಳ್ಳಿ. ನಂತರ ಕೆಲವು ಹನಿ ಆಲಿವ್ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಸ್ವಲ್ಪ ಹೊತ್ತು ಬಿಟ್ಟು ತೊಳೆದುಕೊಳ್ಳಬಹುದು. ಈ ರೀತಿ ಮಾಡುವುದರಿಂದ ಅತ್ಯಂತ ಪರಿಣಾಮಕಾರಿಯಾದ ಫಲಿತಾಂಶ ನಿಮ್ಮದಾಗುತ್ತದೆ.
ಸಾಸಿವೆ ಎಣ್ಣೆ: ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಸುಕ್ಕುಗಟ್ಟುತ್ತಿದೆ ಎಂದು ಅನಿಸುವ ಜಾಗಗಳಿಗೆ ಮೇಲ್ಮುಖವಾಗಿ ಮಸಾಜ್ ಮಾಡಿಕೊಂಡು ಒಂದರ್ಧ ಗಂಟೆ ಹಾಗೇ ಬಿಟ್ಟು ಸ್ನಾನ ಮಾಡಿ. ವಾರದಲ್ಲಿ ಮೂರ್ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಚರ್ಮ ಬಿಗಿಯಾಗುವುದಲ್ಲದೆ, ಕಾಂತಿಯುತವಾಗುತ್ತದೆ. ಸಾಸಿವೆ ಎಣ್ಣೆಯು ಬೆವರು ಗ್ರಂಥಿಗಳನ್ನು ಸಕ್ರಿಯಗೊಳಿಸುತ್ತದೆ, ಇದು ದೇಹದ ನಿರ್ವಿಷೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಚರ್ಮದ ಸೋಂಕುಗಳಿಂದ ರಕ್ಷಿಸುತ್ತದೆ.
ಎಳ್ಳೆಣ್ಣೆ (sesame oil): ಎಳ್ಳೆಣ್ಣೆಯು ನೇರಳಾತೀತ ಕಿರಣಗಳಿಂದ ರಕ್ಷಣೆಯ ಗುಣ ಹೊಂದಿದ್ದು, ಇದು ಚರ್ಮದ ಸುಕ್ಕಿನ ಸಮಸ್ಯೆಗೆ ಪರಿಹಾರ ನೀಡುತ್ತದೆ. ಇದು ಚರ್ಮವನ್ನು ಮಾಲಿನ್ಯದಿಂದ ರಕ್ಷಿಸುತ್ತದೆ. ಹಾಗೂ ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತ ನಿವಾರಕ ಗುಣಗಳನ್ನು ಸಹ ಹೊಂದಿದ್ದು ಮೊಡವೆಗಳಿಂದ ರಕ್ಷಿಸುತ್ತದೆ.
ಮೀನೆಣ್ಣೆ: ಫಿಶ್ ಆಯಿಲ್ ಕ್ಯಾಪ್ಸುಲ್‌ಗಳನ್ನು ಮೆಡಿಕಲ್ ಶಾಪ್‌ನಲ್ಲಿ ಲಭ್ಯವಿರುತ್ತದೆ. ದಿನಕ್ಕೊಂದು ಕ್ಯಾಪ್ಸುಲ್‌ನೊಳಗಿನ ಎಣ್ಣೆಯನ್ನು ತೆಗೆದು 10 ರಿಂದ 15 ನಿಮಿಷ ಮುಖಕ್ಕೆ ಮಸಾಜ್ ಮಾಡಿ. ಮುಖ ಕಾಂತಿಯುತವಾಗುತ್ತದೆ.
ವಿಟಮಿನ್ ಇ ಕ್ಯಾಪ್ಸುಲ್: ಚರ್ಮವನ್ನು ಇದು ಆರೋಗ್ಯವಾಗಿರಿಸುವುದಲ್ಲದೆ, ತಾಜಾ ಆಗಿರಿಸಿ, ಒಳ್ಳೆಯ ಲುಕ್ಕನ್ನು ನೀಡುತ್ತದೆ. ಅಲ್ಲದೆ, ಕಪ್ಪು ಕಲೆಗಳನ್ನೂ ಕಡಿಮೆಗೊಳಿಸುತ್ತದೆ. ಮೆಡಿಕಲ್ ಶಾಪ್‌ಗಳಲ್ಲಿ ಸಿಗುವ ವಿಟಮಿನ್ ಆಯಿಲ್ ಕ್ಯಾಪ್ಸುಲ್ ತೆಗೆದುಕೊಂಡು ಒಂದು ಕ್ಯಾಪ್ಸುಲ್‌ಗೆ ಪಿನ್‌ನಿಂದ ಚುಚ್ಚಿ ತೂತು ಮಾಡಿ 10 ರಿಂದ 15 ನಿಮಿಷ ಮುಖಕ್ಕೆ ಮೇಲ್ಮುಖವಾಗಿ ಮಸಾಜ್ ಮಾಡಿ. ಇದನ್ನು ರಾತ್ರಿ ಮಲಗುವ ಮುಂಚೆ ಹಚ್ಚಿ ಬೆಳಗ್ಗೆ ತೊಳೆಯಬಹುದು.
