Shivamogga: ಅನ್ಯಕೋಮಿನ ಯುವಕರು ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿರುವ ಘಟನೆ ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ (Shivamogga) ನಡೆದಿದೆ.
ಕ್ಷುಲ್ಲಕ ಕಾರಣಕ್ಕೆ ಪ್ರತ್ಯೇಕ ಎರಡು ಪ್ರಕರಣದಲ್ಲಿ ಮೂವರು ಬಜರಂಗದಳ ಕಾರ್ಯಕರ್ತರ (Bajrang dal Activist) ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿದ್ದಾರೆ.
ಗೋಪಾಳದ ವಿನಾಯಕ ಸರ್ಕಲ್ ನಲ್ಲಿ ಶೇಷಣ್ಣ ಎಂಬವರ ಬೈಕ್ ಗೆ ಆಟೋ ಬಾಬು ಮತ್ತು ಇತರೆ ಮುಸ್ಲಿಂ ಯುವಕರು ಇದ್ದ ಆಟೋ ಡಿಕ್ಕಿಯಾಗಿದೆ. ಡಿಕ್ಕಿ ಹೊಡೆದು ಆಟೋ ಸ್ಥಳದಿಂದ ಕಾಲ್ಕಿತ್ತಿದೆ. ಇತ್ತ ಈ ಘಟನೆ ಕಂಡ, ಸ್ಥಳದಲ್ಲೇ ಇದ್ದ ಬಜರಂಗದಳದ ಜಿತೇಂದ್ರ ಮತ್ತು ಸಂದೇಶ್ ಬೈಕ್ ನಲ್ಲಿ ಆಟೋವನ್ನು ಹಿಂಬಾಲಿಸಿದ್ದಾರೆ.
ತುಂಬಾ ದೂರ ಬೆನ್ನಟ್ಟಿದ ನಂತರ ಶಾದಿ ಮಹಲ್ ಬಳಿ ಆಟೋವನ್ನು ತಡೆದು ನಿಲ್ಲಿಸಿದ್ದಾರೆ. ಅಲ್ಲದೆ, ಬೈಕ್ ಗೆ ಗುದ್ದಿದ ವಿಚಾರವಾಗಿ
ವಿಚಾರಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಮುಸ್ಲಿಂ ಯುವಕರು ಕೈ ಇಟ್ಟಿಗೆಯಿಂದ ಸಂದೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಘಟನೆ ಪರಿಣಾಮ ಸಂದೇಶ್ ಕಣ್ಣಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಜಿತೇಂದ್ರ (47), ಸಂದೇಶ (35) ಇಬ್ಬರು ಗಾಯಗೊಂಡಿದ್ದಾರೆ.
ಗೋಪಾಳದ ದ್ರೌಪದಮ್ಮ ಸರ್ಕಲ್ನಲ್ಲಿ ನಡೆದ ಘಟನೆಯಲ್ಲಿ ವಿಜಯ್ ಕುಮಾರ್ ಎಂಬವರ ಮೇಲೆಯೂ ಹಲ್ಲೆ ನಡೆಸಲಾಗಿದೆ. ಮುಸ್ಲಿಂ ಯುವಕ ತಾಸಿನ್ ಎಂಬಾತ ವಿಜಯಕುಮಾರ್ ನನ್ನು ಕರೆಸಿಕೊಂಡು ನಿಂದಿಸಿ ಆತನಿಗೆ ಚಾಕುವಿನಿಂದ ಇರಿದಿದ್ದಾನೆ. ವಿಜಯಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಶಿವಮೊಗ್ಗದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕಣ್ಗಾವಲಾಗಿದ್ದಾರೆ.
