Terrorist: ದುಬೈ ಹಾಗೂ ಇತರೆ ದೇಶಗಳಲ್ಲಿರುವ ಕೆಲವರು, ಭಾರತದಲ್ಲಿ ಭಯೋತ್ಪಾದನೆ ಪ್ರಚೋದಿಸಿ ಶಾಂತಿ ಕದಡಲು ಸಂಚು ರೂಪಿಸುವ ಮಾಹಿತಿ ಬೆಳಕಿಗೆ ಬಂದಿದೆ. ಈಗಾಗಲೇ ಬೆಂಗಳೂರು, ಮಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಬಾಂಬ್ ಸ್ಫೋಟಿಸಿ ಜನರನ್ನು ಕೊಲ್ಲಲು ಸಂಚು ರೂಪಿಸಿದ ಆರೋಪ ಹೊತ್ತಿರುವ ಶಂಕಿತ ಉಗ್ರರಿಗೆ (Terrorist) ಕೆಲ ವಿದೇಶಿಯರು ₹ 15 ಲಕ್ಷ ನೀಡಿರುವ ಮಾಹಿತಿಯನ್ನು ಸಿಸಿಬಿ ಪೊಲೀಸರು ಸಾಕ್ಷಿ ಸಮೇತ ಪತ್ತೆ ಮಾಡಿದ್ದಾರೆ.
‘ಶಂಕಿತ ಉಗ್ರರಾದ ಸೈಯದ್ ಸುಹೇಲ್ ಖಾನ್, ಜಾಹೀದ್ ತಬ್ರೇಜ್, ಸೈಯದ್ ಮುದಾಸೀರ್ ಪಾಷಾ, ಮಹಮ್ಮದ್ ಫೈಜಲ್ ರಬ್ಬಾನಿ ಹಾಗೂ ಮೊಹಮ್ಮದ್ ಉಮರ್ ಖಾತೆಗಳಿಗೆ ಹಣ ಬಂದಿರುವುದಕ್ಕೆ ಪುರಾವೆಗಳು ಸಿಕ್ಕಿವೆ’ ಎಂದು ಮೂಲಗಳು ಹೇಳಿವೆ. ಸದ್ಯ ಹಣ ನೀಡಿರುವ ವಿದೇಶಿಯರು ಯಾರು? ಅವರ ಉದ್ದೇಶವೇನು ? ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮುಂದುವರಿಸಿದ್ದಾರೆ.
‘ ಸದ್ಯ ಬೆಂಗಳೂರು ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಟಿ. ನಾಸೀರ್, ಸದ್ಯ ಜೈಲಿನಲ್ಲಿದ್ದಾನೆ. ಆರ್.ಟಿ. ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಜುನೇದ್ ಅಹಮ್ಮದ್ ಹಾಗೂ ಇತರೆ ಆರೋಪಿಗಳು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಾಸೀರ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದರು. ಧರ್ಮ ರಕ್ಷಣೆಗಾಗಿ ಬಾಂಬ್ ಸ್ಫೋಟಿಸುವಂತೆ ಹೇಳಿದ್ದ ನಾಸೀರ್, ಅದಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದ್ದ. ಇದಕ್ಕೆ ಜುನೇದ್ ಹಾಗೂ ಇತರರು ಒಪ್ಪಿದ್ದರು. ಇದಾದ ಬಳಿಕವೇ ಶಂಕಿತರ ಖಾತೆಗಳಿಗೆ ಹಂತ ಹಂತವಾಗಿ ಹಣ ಬಂದಿದೆ’.
‘ಶಂಕಿತ ಐವರ ಹೆಸರಿನಲ್ಲಿರುವ 20 ಪ್ರತ್ಯೇಕ ಬ್ಯಾಂಕ್ ಖಾತೆಗಳಿಗೆ ಸುಮಾರು ₹ 23 ಲಕ್ಷ ಜಮೆ ಆಗಿದೆ. ಅದರಲ್ಲಿ ₹ 15 ಲಕ್ಷ ವಿದೇಶಿಯರಿಂದ ಬಂದಿದೆ. ಬಹುಪಾಲು ಹಣವನ್ನು ಶಂಕಿತರು ಡ್ರಾ ಮಾಡಿಕೊಂಡಿರುವುದು ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.
‘ಜಾಹೀದ್ ತಬ್ರೇಜ್‌ಗೆ ಹಣದ ವ್ಯವಹಾರದಲ್ಲಿ ಹೆಚ್ಚಿನ ತಿಳಿವಳಿಕೆ ಇದೆ. ಹೀಗಾಗಿ, ಈತನ ಮೂಲಕವೇ ಹೆಚ್ಚು ಬಾರಿ ಬ್ಯಾಂಕ್ ವಹಿವಾಟು ನಡೆದಿದೆ. ದುಬೈನಲ್ಲಿದ್ದಾನೆ ಎನ್ನಲಾದ ಜುನೇದ್, ಜಾಹೀದ್ ತಬ್ರೇಜ್ ಮೂಲಕ ಇತರೆ ಶಂಕಿತರಿಗೂ ಹಣ ತಲುಪಿಸಿದ್ದಾನೆ. ಈ ಬಗ್ಗೆ ಶಂಕಿತರು ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಾಸೀರ್ ಮೂಲಕ ಜುನೇದ್ ಹಾಗೂ ಸಹಚರರಿಗೆ ಹಣ ನೀಡಿರುವ ವಿದೇಶಿಯರು, ‘ತ್ವರಿತವಾಗಿ ಬಾಂಬ್ ಸ್ಫೋಟಿಸಿ’ ಎಂಬುದಾಗಿ ಪದೇ ಪದೇ ಸಂದೇಶ ರವಾನಿಸುತ್ತಿದ್ದ ಮಾಹಿತಿಯನ್ನು ಶಂಕಿತರು ಬಾಯ್ಬಿಟ್ಟಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತರ ಉಗ್ರರ ಖಾತೆಗಳಿಗೆ ಕೆಲ ಸ್ಥಳೀಯರು ₹ 8 ಲಕ್ಷ ಜಮೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
ಪ್ರಮುಖ ಆರೋಪಿ ಟಿ.ನಾಸೀರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಎಂಟು ದಿನಗಳವರೆಗೆ ಸಿಸಿಬಿ ಪೊಲೀಸರ ಕಸ್ಟಡಿಗೆ ವಹಿಸಲಾಗಿದೆ. ಬೆಂಗಳೂರು ಸರಣಿ ಬಾಂಬ್ ಸ್ಫೋಟ ಸೇರಿದಂತೆ 36 ಪ್ರಕರಣಗಳಲ್ಲಿ ಭಾಗಿ ಯಾಗಿರುವ ನಾಸೀರ್ ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ. ‘ನಾಸೀರ್ ಸೂಚನೆಯಂತೆ ಶಂಕಿತರು ಕೆಲಸ ಮಾಡುತ್ತಿದ್ದರು. ಹೀಗಾಗಿ, ನಾಸೀರ್‌ನನ್ನು ವಿಚಾರಣೆಗೆ ಒಳಪಡಿಸಬೇಕಿದ್ದು, ಕಸ್ಟಡಿಗೆ ನೀಡಿ’ ಎಂದು ಸಿಸಿಬಿ ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಗಳಾದ ಜಿ.ಎನ್. ಅರುಣ್ ಹಾಗೂ ಬಿ.ಎಸ್. ಪಾಟೀಲ ಅವರು ಎನ್‌ಐಎ ವಿಶೇಷ ನ್ಯಾಯಾಲಯವನ್ನು ಕೋರಿದ್ದರು. ಮನವಿ ಪುರಸ್ಕರಿಸಿದ ನ್ಯಾಯಾಧೀಶ ಗಂಗಾಧರ ಅವರು, ನಾಸೀರ್‌ನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಎಂದು ಆದೇಶಿಸಿದರು.
ಇದನ್ನು ಓದಿ: Lottery Monsoon Bumper Prize: ಪೌರ ಕಾರ್ಮಿಕರ ಮನೆ ಬಾಗಿಲಿಗೆ ಬಂದ ‘ ಲಕ್ಷ್ಮೀ’!!!ಲಾಟರಿ ಮೂಲಕ ಒಲಿದು ಬಂದ 10 ಕೋಟಿ ಹಣ!!!
