ದೇಶಾದ್ಯಂತ ಭಾರಿ ಸದ್ಧುಮಾಡಿ, ಇದೀಗ ಮತ್ತೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸುತ್ತಿರುವ ಧರ್ಮಸ್ಥಳದ (Dharmastala) ಸೌಜನ್ಯಳ(Sowjanya) ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸಿನಿಮಾ ಆಗುಲು ರೆಡಿಯಾಗುತ್ತಿದೆ. ಆದರೆ ಈ ಬೆನ್ನಲ್ಲೇ ಈ ಸಿನಿಮಾ ನಿರ್ಮಾಣಕ್ಕೆ ಸೌಜನ್ಯಳ ಕುಟುಂಬದವರಿಂದಲೇ ಭಾರೀ ವಿರೋಧ ವ್ಯಕ್ತವಾಗಿದೆ.
ಹೌದು, ಸುಮಾರು 11 ವರುಷಗಳ ಹಿಂದೆ ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯ ಪ್ರಕರಣ ಇದೀಗ ಮತ್ತೆ ಸಂಚಲನ ಸೃಷ್ಟಿಸುತ್ತಿದೆ. ಇದೀಗ ಸೌಜನ್ಯಳ ಕಥೆಯನ್ನು ಸಿನಿಮಾ ಮಾಡಲು ಚಿತ್ರ ತಂಡವೊಂದು ನಿರ್ಧರಿಸಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಎಂದು ಸಿನಿಮಾ ಹೆಸರನ್ನೂ ಕೂಡ ನೋಂದಾಯಿಸಿತ್ತು. ಆದರೆ ಈ ಬೆನ್ನಲ್ಲೇ ಸಿನಿಮಾವನ್ನು ನಿರ್ಮಾಣಕ್ಕೆ ಸೌಜನ್ಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸೌಜನ್ಯ ಮಾವ ವಿಠಲ ಗೌಡರವರು ‘ನಮ್ಮಹೋರಾಟ ಸೌಜನ್ಯಳ ಸಾವಿಗೆ ನ್ಯಾಯ ಕೊಡಿಸುವುದು. ಆದರೆ ನ್ಯಾಯ ಸಿಗುವ ಮುನ್ನವೇ ಚಿತ್ರತಂಡವೊಂದು ಆಕೆಯ ಕುರಿತು ಸಿನಿಮಾ ಮಾಡಲು ಹೊರಟಿದೆ. ಅಲ್ಲದೆ ಸಿನಿಮಾ ಮಾಡಲು ಉದ್ದೇಶಿಸಿರುವ ತಂಡವು ನಮ್ಮನ್ನು ಸಂಪರ್ಕಿಸಿಲ್ಲ. ನಮ್ಮನ್ನು ಸಂಪರ್ಕಿಸದೆ, ಅದು ಹೇಗೆ ಸಿನಿಮಾ ತಯಾರು ಮಾಡಲು ಸಾಧ್ಯ? ಈ ಸಿನಿಮಾದ ಕಥೆಯು ನಿಜವಾದ ಸೌಜನ್ಯ ಸ್ಟೋರಿ ಆಗಿ ಬರುವ ಸಂಭವ ಕಮ್ಮಿಇದೆ. ಸೌಜನ್ಯ ರಿಯಲ್ ಸ್ಟೋರಿಗೆ ವಿರುದ್ಧವಾಗಿ ಈ ಸ್ಟೋರಿ ಇರುವ ಸನ್ನಿವೇಶ ಕಂಡುಬರುತ್ತಿದೆ ‘ಎಂದಿದ್ದಾರೆ.
ಒಂದು ವೇಳೆ ಆಕೆಯ ಬದುಕಲ್ಲಿ ನಡೆದ ನಿಜ ಘಟನೆಯನ್ನು ಈ ಚಿತ್ರ ಆಧರಿಸಿದ್ದರೆ, ನಮ್ಮನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆದು, ಸೌಜನ್ಯ ಅತ್ಯಾಚಾರ ಹತ್ಯೆಯ ಯಥಾವತ್ತು ಚಿತ್ರಣವನ್ನು ಚಿತ್ರಿಸಿದರೆ ಅದಕ್ಕೆ ನಾವು ಒಪ್ಪಬಹುದು. ಆಗ ಮಾತ್ರ ಅದಕ್ಕೆ ನಾವು ಒಪ್ಪಿಗೆ ಸೂಚಿಸುತ್ತೇವೆ’ ಎಂದಿದ್ದಾರೆ ಸೌಜನ್ಯ ಗೌಡ ಮಾವ ವಿಠಲ ಗೌಡ.
ಅಂದಹಾಗೆ, ನಿನ್ನೆ ದಿನ ಸೌಜನ್ಯಳ ಜೀವನವನ್ನಾಧರಿಸಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಟೈಟಲ್ ಕೂಡ ಫಿಕ್ಸ್ ಆಗಿ, ಚಲನಚಿತ್ರ ಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘ಸ್ಟೋರಿ ಆಫ್ ಸೌಜನ್ಯ’ ಎಂದು ನೋಂದಣಿ ಮಾಡಲಾಗಿತ್ತು. ಜಿ.ಕೆ ವೆಂಚರ್ಸ್ ಅವರು ಈ ರಿಜಿಸ್ಟರ್ ಮಾಡಿದ್ದು ವಿ. ಲವ ಅವರು ಚಿತ್ರ ನಿರ್ದೇಶನ ಮಾಡಲಿದ್ದರು. ಸಾಮಾಜಿಕ ಕಥೆಯನ್ನು ಒಳಗೊಳ್ಳುವ ಈ ಚಿತ್ರ ಕನ್ನಡದಲ್ಲಿ ತೆರೆ ಕಾಣಲಿದೆ ಎಂದು ಹೇಳಲಾಗಿತ್ತು. ಆದರೆ ಈ ಬೆನ್ನಲ್ಲೇ ಸೌಜನ್ಯ ಕುಟುಂಬದಿಂದ ವಿರೋಧ ವ್ಯಕ್ತವಾಗಿರುವುದು ಅಚ್ಚರಿ ಮೂಡಿಸಿದೆ.
