Tech tips: ದೇಶದಾದ್ಯಂತ ಮಳೆಯ ಅಬ್ಬರ ಜೋರಾಗಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಅಲರ್ಟ್ ಘೋಷಿಸಿದೆ. ಈ ಮಳೆಗಾಲದಲ್ಲಿ ಹೊರಗೆ ಹೋಗಲು ಕಷ್ಟವಾಗುತ್ತದೆ. ಆದರೆ ಕೆಲವೊಂದು ಬಾರಿ ಅಗತ್ಯಕ್ಕೆ ಬೇಕಾದಾಗ ವಸ್ತುಗಳನ್ನು ತರಲು ಹೊರಗಡೆ ಹೋಗಲೇಬೇಕಾಗುತ್ತದೆ. ಅಲ್ಲದೆ ನೌಕರರು ಪ್ರತಿದಿನ ಕೆಲಸಕ್ಕೆ ಹೋಗಬೇಕಾಗುತ್ತದೆ. ಮಳೆಗೆ ಸಿಲುಕಿಕೊಂಡವರು ತಕ್ಷಣ ತಮ್ಮ ಮೊಬೈಲ್ ಒದ್ದೆಯಾಗದಂತೆ ನೋಡಿಕೊಳ್ಳುತ್ತಾರೆ. ಕೆಲವೊಮ್ಮೆ ಕೈಯಲ್ಲಿ ಪ್ಲಾಸ್ಟಿಕ್ ಇತ್ಯಾದಿಗಳು ಇಲ್ಲದೆ ಇದ್ದರೆ ಮೊಬೈಲನ್ನು ರಕ್ಷಿಸಲು ಪರದಾಡುತ್ತಾರೆ. ಅದಕ್ಕಾಗಿ ಮಳೆಗಾಲದಲ್ಲಿ ಸ್ಮಾರ್ಟ್‌ಫೋನ್ ಒದ್ದೆಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಅತ್ಯಗತ್ಯ. ಅದೇ ರೀತಿ ಮಳೆಯಲ್ಲಿ ಮೊಬೈಲ್ ಒದ್ದೆಯಾದ ತಕ್ಷಣ ಕೆಲವೊಂದು ಕೆಲಸಗಳನ್ನು ಮಾಡಬಾರದು (Tech tips) . ಹಾಗಾದರೆ ಯಾವುವು ಎಂಬುದನ್ನು ತಿಳಿದುಕೊಳ್ಳೋಣ.
ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಸಾಮಾನ್ಯ ಫೋನ್ ಒದ್ದೆಯಾಗಿದೆಯೆಂದು ತಿಳಿದ ತಕ್ಷಣ ಎಲ್ಲಾದರೂ ಬೆಚ್ಚಗಿನ ಸ್ಥಳಕ್ಕೆ ಹೋಗಿ ಮೊಬೈಲ್ ಫೋನ್ ಬ್ಯಾಟರಿ ತೆಗೆಯಿರಿ. ಬ್ಯಾಟರಿ ತೆಗೆಯಲಾಗದ ಫೋನ್ ಆಗಿದ್ದರೆ ಈ ಕ್ರಮ ಸಾಧ್ಯವಿಲ್ಲ. ಅಲ್ಲದೆ ಸಿಮ್ ಕಾರ್ಡ್, ಮೆಮೊರಿ ಕಾರ್ಡ್ ಇತ್ಯಾದಿಗಳನ್ನು ತೆಗೆದುಹಾಕಿ. ಸ್ಮಾರ್ಟ್ ಫೋನ್ ನಲ್ಲಿ ನೀರಿದ್ದರೆ ಮೃದುವಾದ ಬಟ್ಟೆಯಿಂದ ನಿಧಾನವಾಗಿ ಒರೆಸಿ. ಬಟನ್, ಹೆಡ್‌ಫೋನ್ ಜ್ಯಾಕ್, ಪೋರ್ಟ್‌ಗಳಲ್ಲಿ ನೀರು ಕಂಡರೆ ಅದನ್ನು ಸಹ ಒರೆಸಿ.
ಸ್ಮಾರ್ಟ್ಫೋನ್ ಮಳೆಯಲ್ಲಿ ಒದ್ದೆಯಾದಾಗ, ಸ್ವಿಚ್ ಆಫ್ ಮಾಡಿ ಮತ್ತು ನೀರನ್ನು ತೆಗೆಯಲು ಹೇರ್ ಡ್ರೈಯರ್ ನಂತಹ ಯಾವುದೇ ಸಾಧನಗಳನ್ನು ಬಳಸಬೇಡಿ. ಇನ್ನು ಕೆಲವೊಮ್ಮೆ ಮೊಬೈಲ್ಗಳು ಒದ್ದೆಯಾದ ತಕ್ಷಣ ಸ್ವಿಚ್ಆಫ್ ಆಗುತ್ತದೆ. ಆಗ ಬಳಕೆದಾರರು ಸ್ಮಾರ್ಟ್ಫೋನ್ ಅನ್ನು ಚಾರ್ಜ್ ಮಾಡಲು ಮುಂದಾಗುತ್ತಾರೆ. ಆದರೆ ಈ ರೀತಿ ಯಾವತ್ತೂ ಮಾಡಬೇಡಿ.
ಮಳೆಯಲ್ಲಿ ನಡೆಯುವಾಗ ಸಾಮಾನ್ಯವಾಗಿ ಸ್ಮಾರ್ಟ್‌ಫೋನ್ ಒದ್ದೆಯಾದರೆ ಸಾಕು ಬಳಕೆದಾರರಿಗೆ ಒಮ್ಮೆ ಟೆನ್ಷನ್ ಆಗಿಬಿಡುತ್ತೆ. ಈ ಸಮಯದಲ್ಲಿ ಕೆಲವರು ಗಾಬರಿಯಿಂದ ಏನೇನೋ ಮಾಡುತ್ತಾರೆ. ಅದು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ನೋಡಲು ಅನೇಕರು ಅದನ್ನು ತಕ್ಷಣವೇ ಆಪರೇಟಿಂಗ್ ಮಾಡುವ ಅಭ್ಯಾಸವನ್ನು ಹೊಂದಿರುತ್ತಾರೆ. ಈ ತಪ್ಪು ಯಾವತ್ತೂ ಮಾಡಬಾರದು.
ಮೊಬೈಲ್ ಒದ್ದೆಯಾಗಿದೆ ಮತ್ತು ಸಾಧನದೊಳಗೆ ನೀರು ಹೋಗಿದೆ ಎಂದು ನಿಮಗೆ ಭಾವಿಸಿದರೆ, ತಕ್ಷಣ ಅದನ್ನು ಸ್ವಿಚ್ ಆಫ್ ಮಾಡಿ. ಏಕೆಂದರೆ ನೀರು ಮೊಬೈಲ್ ಒಳಗೆ ಹೋದಾಗ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೆಯೇ ಮೊಬೈಲ್ ಆಂತರಿಕ ಭಾಗಗಳಿಗೆ ನೀರಿನಿಂದ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು.
ನೀರಿನಲ್ಲಿ ನಿಮ್ಮ ಮೊಬೈಲ್ ನೆನೆದಿದ್ದರೆ, ಅದನ್ನು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಬದಲಿಗೆ ಒಂದು ಪಾತ್ರೆಯಲ್ಲಿ ಅಕ್ಕಿ ಸುರಿಯಿರಿ ಮತ್ತು ಅದರಲ್ಲಿ ನಿಮ್ಮ ಮೊಬೈಲ್ ಅನ್ನು ಕನಿಷ್ಠ 24 ಗಂಟೆಗಳ ಕಾಲ (1 ದಿನ) ಇಡಿ. ಹೀಗೆ ಮಾಡುವುದರಿಂದ ಫೋನ್‌ನಲ್ಲಿರುವ ತೇವಾಂಶವನ್ನು ಅಕ್ಕಿ ಹೀರಿಕೊಳ್ಳುತ್ತದೆ. ಮೊಬೈಲ್ ತುಂಬಾ ಹಾಳಾಗಿರುವಂತೆ ಕಂಡರೆ ಸ್ವಿಚ್ ಆಫ್ ಮಾಡಿ ಹತ್ತಿರದ ಮೊಬೈಲ್ ರಿಪೇರಿ ಶಾಪ್ಗೆ ತೆಗೆದುಕೊಂಡು ಹೋಗಿರಿ.
ಎಲ್ಲಾದರೂ ನಿಮ್ಮ ಮೊಬೈಲ್ ಫೋನ್ ಒದ್ದೆಯಾದ ತಕ್ಷಣ ಹತ್ತಿರದ ಸರ್ವೀಸ್ ಸೆಂಟರ್‌ಗೆ ಹೋಗಲು ಸಾಧ್ಯವಾದರೆ ತಕ್ಷಣ ಅಂತಹ ಶಾಪ್ ಬಳಿಗೆ ಹೋಗಿ. ಈ ರೀತಿ ಮಾಡಲು ಸಾಧ್ಯವಾಗದಿದ್ದರೆ ಮಾತ್ರ ನೀವೇ ಇತರೆ ಕ್ರಮಗಳನ್ನು ಮಾಡಿ.
ಎಲ್ಲಕ್ಕಿಂತ ಮುಖ್ಯವಾಗಿ ಮಳೆಗಾಲದಲ್ಲಿ ಮೊಬೈಲ್ ಫೋನ್ ಒದ್ದೆಯಾಗದಂತೆ ಎಚ್ಚರಿಕೆ ವಹಿಸಿ. ವಾಟರ್ ಪ್ರೂಫ್ ಕವರ್ ಇತ್ಯಾದಿಗಳನ್ನು ಬಳಸುವ ಮೂಲಕ ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿರಿಸಿ. ಮೊಬೈಲ್ ಅನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಜಿಪ್ ಲಾಕ್ ಸಹ ಮಾಡಬಹುದು. ಇದರಿಂದ ಸ್ಮಾರ್ಟ್ಫೋನ್ ಒದ್ದೆಯಾಗುವುದಿಲ್ಲ.
ಇದನ್ನು ಓದಿ: ಏಕಲವ್ಯ ಮಾದರಿ ಶಾಲೆಯಲ್ಲಿ 4,062 ಶಿಕ್ಷಕರ ನೇಮಕಾತಿಯ ಸುವರ್ಣ ಅವಕಾಶ
