Delhi: ಇಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ನಂತರ, ಭಾರತೀಯ ಬಾರ್ ಕೌನ್ಸಿಲ್ ವಕೀಲ ರಾಕೇಶ್ ಕಿಶೋರ್ ಅವರ ಪರವಾನಗಿಯನ್ನ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದೆ.
ಹೌದು, ಕೋರ್ಟ್ ಕಲಾಪದ ವೇಳೆಯಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬಿರ್.ಆರ್. ಗವಾಯಿ ವಿರುದ್ಧ ಶೂ ಎಸೆಯಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಂತರ ಹಿರಿಯ ವಕೀಲ ರಾಕೇಶ್ ಕಿಶೋರ್ ಅವರನ್ನು ಅಭ್ಯಾಸದಿಂದ ಬಾರ್ ಕೌನ್ಸಿಲ್ ಆಫ್ ಇಂಡಿಯಾ ವಜಾಗೊಳಿಸಿದೆ.
ಏನಿದು ಘಟನೆ?
ಹಿರಿಯ ವಕೀಲನೊಬ್ಬ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರತ್ತ ಶೂ ಎಸೆಯಲು ಪ್ರಯತ್ನಿಸಿದ್ದು, ನ್ಯಾಯಾಲಯದ ಒಳಗೆ ಕೆಲ ಕ್ಷಣ ತೀವ್ರ ಗೊಂದಲ ಉಂಟಾಯಿತು. ಘಟನೆ ನ್ಯಾಯಾಲಯ ಸಂಖ್ಯೆ 1ರಲ್ಲಿ ನಡೆದಿದ್ದು, ಸಿಜೆಐ ಗವಾಯಿ ವಿಚಾರಣೆ ನಡೆಸುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ. ಭದ್ರತಾ ಸಿಬ್ಬಂದಿ ತಕ್ಷಣವೇ ಕ್ರಮಕೈಗೊಂಡು ವಕೀಲನನ್ನು ವಶಕ್ಕೆ ಪಡೆದರು. ಘಟನೆಯ ನಂತರ ಸಿಜೆಐ ಗವಾಯಿ ಶಾಂತತೆಯಿಂದ ವಿಚಾರಣೆಯನ್ನು ಮುಂದುವರೆಸಿ, “ಈ ರೀತಿಯ ಘಟನೆಗಳು ನನ್ನ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,” ಎಂದು ಹೇಳಿದರು.
ವಕೀಲನನ್ನು ಕರೆದೊಯ್ಯುವಾಗ ಆತ “ಸನಾತನ ಕಾ ಅಪ್ಮಾನ್ ನಹಿ ಸಹೇಂಗೇ (ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ)” ಎಂದು ಕೂಗಾಡಿದ ಎಂದು ಕೋರ್ಟ್‌ನೊಳಗಿನ ಮೂಲಗಳು ತಿಳಿಸಿವೆ.
ಸದ್ಯ ಇದೀಗ ವಕೀಲರ ಲೈಸೆನ್ಸ್ ರದ್ದು ಮಾಡಲಾಗಿದ್ದು ಆದೇಶವನ್ನ ಸ್ವೀಕರಿಸಿದ 15 ದಿನಗಳಲ್ಲಿ ವಕೀಲರು ಪ್ರತಿಕ್ರಿಯಿಸುವಂತೆ, ಅಮಾನತು ಏಕೆ ಮುಂದುವರಿಸಬಾರದು ಮತ್ತು ಮುಂದಿನ ಕ್ರಮ ಏಕೆ ತೆಗೆದುಕೊಳ್ಳಬಾರದು ಎಂಬುದನ್ನು ವಿವರಿಸುವಂತೆ ಒತ್ತಾಯಿಸಿ ಶೋಕಾಸ್ ನೋಟಿಸ್ ನೀಡಲಾಗುತ್ತದೆ.
