ಜೈಪುರ: ಮದುವೆಗೆ ನಿಗದಿಪಡಿಸಿದಷ್ಟು ವಯಸ್ಸಾಗಿರದಿದ್ದರೂ, ಸಮ್ಮತಿಯ ಮೇಲೆ ಪ್ರಾಪ್ತ ವಯಸ್ಕರಿಬ್ಬರು ಲಿವ್ ಇನ್ ಸಂಬಂಧದಲ್ಲಿ ಮುಂದುವರಿಯಲು ಅರ್ಹರು ಎಂದು ರಾಜಸ್ಥಾನ ಹೈಕೋರ್ಟ್ ತೀರ್ಪು ನೀಡಿದೆ. ಕೋಟಾ ಮೂಲದ 18 ವರ್ಷದ ಯುವತಿ, 19 ವರ್ಷದ ಯುವಕನ ಲಿವ್ ಇನ್ ರಿಲೇಶನ್ ಶಿಪ್ ಅರ್ಜಿಯ ವಿಚಾರಣೆ ನಡೆಸಿದ ಪೀಠವು ಈ ತೀರ್ಪು ನೀಡಿದೆ.
ಅವರಿಬ್ಬರು ಯುವತಿಯ ಕುಟುಂಬದಿಂದ ಬೆದರಿಕೆ ಇದ್ದ ಕಾರಣ ರಕ್ಷಣೆ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ವಿಚಾರಣೆ ವೇಳೆ ಸರಕಾರಿ ವಕೀಲರು, ಯುವಕನಿಗೆ 21 ವರ್ಷ ತುಂಬಿಲ್ಲ ಎಂದು ಕೋರ್ಟಿನ ಗಮನ ಸೆಳೆದರು. 21 ವರ್ಷ ಗಂಡಸರ ಮದುವೆಯ ವಯಸ್ಸು ಆಗಿದ್ದರೆ, 18 ವರ್ಷಕ್ಕೇ ವಯಸ್ಕರು ಅಥವಾ ಪ್ರಾಪ್ತ ವಯಸ್ಕರು ಆಗುತ್ತಾರೆ.
ಆದರೆ, ‘ಮದುವೆಯ ವಯಸ್ಸನ್ನು ತಲುಪಿಲ್ಲ ಎಂಬ ಕಾರಣಕ್ಕೆ ಸಂವಿಧಾನದ ಪರಿಚ್ಚೇದ 21ರಡಿಯಲ್ಲಿ ಜೀವನದ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನಿರಾಕರಿಸಲಾಗದು ಎಂದು ಅದು ಹೇಳಿದ್ದು, ಸರಕಾರಿ ವಕೀಲರ ವಾದವನ್ನು ತಿರಸ್ಕರಿಸಿ, 18 ವರ್ಷದ ಹುಡುಗ ಮತ್ತು 19 ವರ್ಷದ ಹುಡುಗಿಯ ಲಿವ್ ಇನ್ ರಿಲೇಶನ್ ಶಿಪ್ ಗೆ ತಥಾಸ್ತು ಎಂದಿದೆ.
