ಇತ್ತೀಚಿನ ಮದುವೆಗಳಲ್ಲಿ ಚಿತ್ರ ವಿಚಿತ್ರವಾದ ಸನ್ನಿವೇಶಗಳು ಕಂಡುಬರುತ್ತಿರುವುದು ಸಾಮಾನ್ಯವಾಗಿದೆ. ಹಿಂದಿನ ಕಾಲದ ಮದುವೆಗೂ, ಇಂದಿನ ಮದುವೆಗೂ ಅದೆಷ್ಟೋ ವ್ಯತ್ಯಾಸಗಳಿವೆ ಎಂದರೆ, ವಧು ವರರು ಮದುವೆ ಮಂಟಪದಲ್ಲಿ ಕುಣಿದು ಕುಪ್ಪಳಿಸುವವರೆಗೂ ಇಂದಿನ ಪೀಳಿಗೆ ಮುಂದುವರಿದಿದೆ. ಆದರೆ ಅದೇ ಮದುವೆ ಮಂಟಪದ ವೇದಿಕೆಯಲ್ಲಿ ವಧು ವರರು ಕಬಡ್ಡಿ ಆಡಿದರೆ..!?
ಹೌದು ಉತ್ತರ ಪ್ರದೇಶದಲ್ಲಿ ನಡೆದ ಮದುವೆಯಲ್ಲಿ ಇಂಥ ಸನ್ನಿವೇಶವೊಂದು ನಡೆದು ಅತಿಥಿಗಳಿಗೆ ಹಾಸ್ಯದ ಜೊತೆಗೆ, ಮದುವೆಯಲ್ಲಿ ಹೀಗೂ ನಡೆಯುತ್ತದೆಯೇ ಎಂಬ ಪ್ರಶ್ನೆ ಮೂಡಿದೆ. ವಧು ವರರು ಹಾರ ಬದಲಾಯಿಸಿಕೊಳ್ಳುವಾಗ ನಡೆದ ಘಟನೆ ಇದಾಗಿದ್ದು ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಈ ಘಟನೆಯನ್ನು ತಮ್ಮ ಟ್ವಿಟರ್ ಪೇಜ್ ನಲ್ಲಿ ಶೇರ್ ಮಾಡಿ ನೆಟ್ಟಿಗರನ್ನು ಖುಷಿಪಡಿಸಿದ್ದಾರೆ.
ಸದ್ಯ ವೈರಲ್ ಆದ ವಿಡಿಯೋದಲ್ಲಿ ವರನು ವಧುವಿಗೆ ಹಾರ ಹಾಕಲು ಪ್ರಯತ್ನಿಸಿದಾಗ ವಧು ಅನೇಕ ಬಾರಿ ಹಿಂದಕ್ಕೆ ಬಾಗಿದ್ದು ನಂತರ ಹಿಂದಕ್ಕೆ ಸರಿದು ಅಲ್ಲಿಂದ ಸ್ಟೇಜ್’ನ ಇನ್ನೊಂದು ಬದಿಗೆ ಓಡಿಹೋಗಿ ಹಾಗೆಯೇ ಪೂರ್ತಿ ಸ್ಟೇಜ್ ಸುತ್ತಲೂ ತಿರುಗಿ ವರನನ್ನು ಕಾಡುತ್ತಾಳೆ.
ವರನು ಇನ್ನೂ ಸ್ವಲ್ಪ ಮುಂದೆ ಮುಂದೆ ಹೋಗಿ ಹಾರ ಹಾಕಲು ಪ್ರತ್ನಿಸಿದಾಗ ವಧುವು ಪೂರ್ತಿ ಸ್ಟೇಜ್ ಮೇಲೆ ಓಡಾಡಿದ್ದು ವರ ಕೈಯಲ್ಲಿ ಹಾರವನ್ನು ಹಿಡಿದು ಆಕೆಯನ್ನು ಹಿಂಬಾಲಿಸಿದ್ದಾನೆ. ಈ ದೃಶ್ಯವು ಅಲ್ಲಿ ನೆರೆದಿದ್ದ ಅತಿಥಿಗಳಿಗೆ ವಧು ವರರಿಬ್ಬರೂ ಕಬಡ್ಡಿ ಆಟ ಆಡಿದಂತೆ ಕಾಣಿಸುತ್ತಿದ್ದು, ತಮ್ಮ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡರು.ವರನ ಸ್ನೇಹಿತರು ವರನಿಗೆ ವಧುವಿಗೆ ಹಾರ ಹಾಕಲು ಸಹಾಯವಾಗಲು ಸ್ಟೇಜ್ ಮೇಲೆ ವಧು ವರನಿಗೆ ಕುಳಿತುಕೊಳ್ಳಲು ತಂದಂತಹ ಕುರ್ಚಿಯನ್ನೂ ಪಕ್ಕಕ್ಕೆ ತೆಗೆದು ಇಡುತ್ತಾರೆ. ಕೊನೆಗೂ ಹರಸಾಹಸ ಮಾಡಿ ವಧುವಿನ ಕೊರಳಿಗೆ ಹಾರ ಹಾಕುವಲ್ಲಿ ವರ ಯಶಸ್ವಿಯಾಗುತ್ತಾನೆ. ಹಾರವನ್ನು ಹಾಕಿಸಿಕೊಳ್ಳಲು ವರನ ಜೊತೆ ಈ ಪರಿಯ ಕಬಡ್ಡಿ ಆಡಿದ್ದು ಇದೇ ಮೊದಲು ಎಂಬಂತೆ ಅನ್ನಿಸುವುದರ ಜೊತೆಗೆ ವಧುವಿನ ಈ ಅತಿರೇಕದ ವರ್ತನೆಗೆ ಕೆಲ ನೆಟ್ಟಿಗರು ಸಿಟ್ಟಾಗಿರುವುದು ಕೂಡಾ ಹೌದು.
ಇಂಥದ್ದೇ ಹತ್ತು ಹಲವು ಬೇರೆ ಬೇರೆ ವಿಶಿಷ್ಟವಾದ ಮತ್ತು ವಿಚಿತ್ರವಾದ ಘಟನೆಗಳು ಮದುವೆ ಮನೆಯಲ್ಲಿ ನಡೆಯುತ್ತಿರುವುದನ್ನು ನಾವು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಿದ್ದೇವೆ. ಇಂತಹದೇ ಒಂದು ಘಟನೆಯಲ್ಲಿ ಮೂರು ಷರತ್ತುಗಳಿಗೆ ವರನಿಂದ ಸಹಿ ಹಾಕಿಸಿಕೊಂಡು ಮನೆಯೊಳಗೇ ಬಿಟ್ಟ ಘಟನೆಯ ವಿಡಿಯೋ ಸಹ ವೈರಲ್ ಆಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
