Mangaluru: ಮಲ್ಪೆ ಬಂದರಿನಲ್ಲಿ ಮೀನು ಕದ್ದ ಮಹಿಳೆಯ ಮೇಲೆ ಹಲ್ಲೆ ಮಾಡಿದವರನ್ನು ಅರೆಸ್ಟ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೀನುಗಾರರ ಸಂಘದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆ ಅರೆಸ್ಟ್ ಮಾಡಿದವರನ್ನು ಶೀಘ್ರವೇ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ನಾಳೆ ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ.
ಈ ಬಗ್ಗೆ ಮೀನುಗಾರರ ಸಂಘ `ಜಾತಿ ಭೇದ ಬಿಟ್ಟು ದುಡಿಯುತ್ತಿರುವ ಸಮಸ್ತ ಮೀನುಗಾರರಲ್ಲಿ ವಿನಂತಿ… ಮೀನುಗಾರರ ಮೇಲೆ ಇಲ್ಲಸಲ್ಲದ ಆರೋಪ ಮಾಡಿ ಒಬ್ಬರು ಮಾಡಿದ ತಪ್ಪಿಗೆ ನಾಲ್ಕು ಮಂದಿಯನ್ನು ಬಂಧಿಸಿ ಅವರ ಮೇಲೆ ಇಲ್ಲಸಲ್ಲದ ಜಾಮೀನು ರಹಿತ ಕೇಸ್ ಗಳನ್ನು ಹಾಕಿದ್ದಾರೆ. ಆದ್ರೆ ಸುಮಾರು 15 ಸಾವಿರ ಬೆಳೆಬಾಳುವ ದೊಡ್ಡ ಗಾತ್ರದ ಸಿಗಡಿಯನ್ನು ಕದ್ದ ಮಹಿಳೆಯ ಮೇಲೆ ಯಾವುದೇ ಪ್ರಕರಣ ದಾಖಲಿಸದೆ ಇರುವುದು ಸರಿಯೇ…? ಆದ್ದರಿಂದ ನಾಳೆ ಮಲ್ಪೆ ಬಂದರಿನಲ್ಲಿ ಎಲ್ಲಾ ವಿಭಾಗದ ಭೋಟಿನವರಿಂದ ಮತ್ತು ಮಲ್ಪೆ ಬಂದರಿನಲ್ಲಿರುವ ಎಲ್ಲಾ ಸಂಘ ಸಂಸ್ಥೆಯವರನ್ನು ಕರಾವಳಿಯ ಎಲ್ಲಾ ಭಜನಾ ಮಂದಿರದವರನ್ನು ಮಹಿಳಾ ಮಂಡಳಿಯವರನ್ನು ಹಾಗೂ ಸಮಸ್ತ ಎಲ್ಲಾ ಜಾತಿಯ ಮೀನುಗಾರರನ್ನು ಸೇರಿಸಿಕೊಂಡು ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಬೆಳಗ್ಗೆ 9ರಿಂದ 12 ರ ತನಕ ಬೃಹತ್ ಪ್ರತಿಭಟನೆ ಮಾಡಲಾಗುವುದು. ಮಲ್ಪೆ ಬಂದರಿನ ಅನ್ನದ ಋಣ ಇರುವ ಎಲ್ಲರೂ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕಾಗಿ ವಿನಂತಿ’ ಎಂದು ಮನವಿ ಮಾಡಿದೆ.
ಪ್ರತಿಷ್ಠಿತ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 9 ಗಂಟೆಗೆ ಸರಿಯಾಗಿ ಮಲ್ಪೆ ಬಂದರಿನಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಸಮಸ್ತ ಮಲ್ಪೆಯ ಸುತ್ತಮುತ್ತಲಿನ ಎಲ್ಲಾ ಜಾತಿಯ ಮೀನುಗಾರರು ಒಗ್ಗಟ್ಟಾಗಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಗಿದೆ.
