Anekal: ಜಿಗಣಿ ಬಳಿ ಎಳನೀರು ವ್ಯಾಪಾರಿಯ ಮಚ್ಚು ಕಿತ್ತುಕೊಂಡು ಇಬ್ಬರ ಮೇಲೆ ಹಲ್ಲೆ ಮಾಡಿ, ನಂತರ ವಿದ್ಯುತ್ ಕಂಬವೇರಿ ಹೈಡ್ರಾಮಾ ಸೃಷ್ಟಿ ಮಾಡಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಜಾರ್ಖಂಡ್ ಮೂಲದ ರಾಜ್ಮುಂಡ (45) ಬಂಧಿತ. ಈತ ಜಿಗಣಿಯ ಒಟಿಸಿ ಸರ್ಕಲ್ ಬಳಿ ಎಳನೀರು ವ್ಯಾಪಾರಿಯ ಬಳಿ ಮಚ್ಚು ತೆಗೆದುಕೊಂಡು ಅಲ್ಲೇ ಇದ್ದ ಶ್ರೀಧರ್, ಯೂನಸ್ ಆಲಂ ಎಂಬುವವರ ಮೇಲೆ ಹಲ್ಲೆ ಮಾಡಿದ್ದು, ಆ ಸಂದರ್ಭದಲ್ಲಿ ಜನರು ಆತನನ್ನು ಹಿಡಿಯಲು ಮುಂದೆ ಬಂದಾಗ ನಿರ್ಮಾಣ ಹಂತದ ಕಟ್ಟಡವೇರಿ ಪಕ್ಕದಲ್ಲಿದ್ದ ವಿದ್ಯುತ್ ಕಂಬವೇರಿ ಬಿಟ್ಟಿದ್ದಾನೆ.
ಅಲ್ಲಿಂದ ಆತನನ್ನು ಕೆಳಗಿಳಿಸಲು ಸಾರ್ವಜನಿಕರು ಮಾಡಿದ ಪ್ರಯತ್ನ ಪ್ರಯೋಜನವಾಗಲಿಲ್ಲ. ಅಲ್ಲದೆ ಜಿಗಣಿ ಪೊಲೀಸರ ಮನವಿಗೂ ಆತ ಕೇಳದೆ ಸರಿಸುಮಾರು ಎರಡು ಗಂಟೆಗಳ ಕಾಲ ರಾದ್ಧಾಂತ ಮಾಡಿದ್ದ. ಕೊನೆಗೆ ಕಟ್ಟಡದ ಮೇಲೆ ಹತ್ತಿ ಸ್ಥಳೀಯರು ವಿದ್ಯುತ್ ಕಂಬದ ಮೇಲೆ ಇದ್ದ ಈತನನ್ನು ಮನವೊಲಿಸಿದ್ದಾರೆ. ಅನಂತರ ಆತ ಕೆಳಗೆ ಇಳಿದಿದ್ದಾನೆ. ಈತ ಯಾವುದೇ ಪ್ರಶ್ನೆಗೆ ಸರಿಯಾಗಿ ಉತ್ತರ ನೀಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಈತನಿಂದ ಗಾಯಗೊಂಡ ಇಬ್ಬರನ್ನು ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
