UP: ನನ್ನ ಮೊದಲನೇ ಹೆಂಡತಿ ಬಿಟ್ಟು ಹೋಗಿದ್ದಾಳೆ. ನನಗೆ ಅಡುಗೆ ಮಾಡಲು ಬಟ್ಟೆ ಒಗೆಯಲು ಯಾರು ಇಲ್ಲ. ಹೀಗಾಗಿ ಎರಡನೇ ಮದುವೆ ಮಾಡಿಸಿ, ಇಲ್ಲದಿದ್ದರೆ ನಾನು ಮೇಲಿನಿಂದ ಬಿದ್ದು ಸತ್ತು ಹೋಗುತ್ತೇನೆ ಎಂದು ವ್ಯಕ್ತಿಯೊಬ್ಬ ಪ್ರತಿಭಟಿಸಿದಂತಹ ವಿಚಿತ್ರ ಘಟನೆ ಎಂದು ಉತ್ತರ ಪ್ರದೇಶದಲ್ಲಿ ನಡೆದಿದೆ.
ಹೌದು, ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ಇಸ್ಲಾಂನಗರದಲ್ಲಿ ಇಂತಹ ಒಂದು ವಿಚಿತ್ರ ವಿದ್ಯಮಾನ ಬೆಳಕಿಗೆ ಬಂದಿದೆ. ಹರ ಪ್ರಸಾದ್ ಮೌರ್ಯ ಎಂಬಾತನೇ ಇಂತಹ ಸಾಹಸ ಮಾಡಿದ ಶೂರ. ಆತ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯಿರುವ 30 ಅಡಿ ಎತ್ತರದ ನೀರಿನ ಟ್ಯಾಂಕ್ ಮೇಲೆ ಹತ್ತಿ ಎರಡನೇ ಮದುವೆ ಬೇಕು ಎಂದು ಪ್ರತಿಭಟಿಸಿದ್ದಾನೆ. ವ್ಯಕ್ತಿಯ ಪ್ರತಿಭಟನೆ ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿ ಅವರು ಸುಮಾರು 30 ನಿಮಿಷಗಳ ಕಾಲ ಮನವೊಲಿಸಿ ವ್ಯಕ್ತಿಯನ್ನು ಸಮಾಧಾನಪಡಿಸಿ ಕೆಳೆಗೆ ಇಳಿಸಿದ್ದಾರೆ.
ಈ ವೇಳೆ ಪೊಲೀಸರೊಂದಿಗೆ ಮಾತನಾಡಿರುವ ಹರ ಪ್ರಸಾದ್ ಮೌರ್ಯ, ಸರ್ ನಾನು ಹತ್ತು ದಿನಗಳಿಂದ ಇದೇ ಕೊಳಕು ಬಟ್ಟೆಗಳನ್ನು ಧರಿಸಿದ್ದೇನೆ. ಅವುಗಳನ್ನು ತೊಳೆಯಲು ಯಾರು ಇಲ್ಲ. ಎಲ್ಲರಿಗೂ ಹೆಂಡತಿಯರಿದ್ದಾರೆ. ನನಗೂ ಹೆಂಡತಿ ಬೇಕು. ನನ್ನ ಮೊದಲ ಹೆಂಡತಿ ನನ್ನನ್ನು ಬಿಟ್ಟು ಹೋದಳು. ನೀವು ನನಗೆ ಎರಡನೇ ಹೆಂಡತಿಯನ್ನು ನೀಡದಿದ್ದರೆ, ನಾನು ಸಾಯುತ್ತೇನೆ ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನೂ ವ್ಯಕ್ತಿಯ ಪೋಷಕರು ತಮ್ಮ ಮಗ ಅಸ್ವಸ್ಥ ಎಂದು ತಿಳಿಸಿದ್ದಾರೆ. ಪೊಲೀಸರು ಹರ ಪ್ರಸಾದ್‌ಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದು, ಬಳಿಕ ಪೋಷಕರಿಗೆ ಹಸ್ತಾಂತರಿಸಿದ್ದಾರೆ.
