IPL betting: ಬೆಟ್ಟಿಂಗ್ ( IPL betting ) ಹುಚ್ಚು ಸಾಹಸ ಮಾಡಲು ಹೊರಟರೆ ಕೊನೆಗೆ ಅನಾಹುತ ಆಗುವುದು ಖಂಡಿತಾ. ಹೌದು, ಬೆಟ್ಟಿಂಗ್ ಎನ್ನುವುದು ಒಂದು ಕೆಟ್ಟ ನಶೆ ಆಗಿದೆ. ಒಂದು ಸಾರಿ ಕಮಿಟ್ ಆದರೆ ಕೆಲವರಿಗೆ ಅದರ ನಶೆ ಇಳಿಯುವ ವರೆಗೆ ಬೆಟ್ಟಿಂಗ್ ಗೆಲ್ಲಲು ಏನು ಬೇಕಾದರೂ ಮಾಡುತ್ತಾರೆ. ಇನ್ನು ಸೋತವರು ಒಂದೋ ನೇಣಿಗೆ ಕೊರಳು ಒಡ್ಡಬೇಕು. ಇಲ್ಲಾ, ಗೆದ್ದವನನ್ನು ಮುಗಿಸಿಬಿಡಬೇಕು ಎನ್ನುವುದೇ ಬೆಟ್ಟಿಂಗ್ ನ ಇನ್ನೊಂದು ರೂಪ ಆಗಿದೆ.
ಇದೀಗ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಚಿಕ್ಕರಸಿನಕೆರೆಯಲ್ಲಿ ಬೆಟ್ಟಿಂಗ್ ನಿಂದ ಯುವಕನೋರ್ವ ಬಲಿಯಾಗಿದ್ದಾನೆ. ಹೌದು, ಬೆಟ್ಟಿಂಗ್ ಹಣ ನೀಡುವ ವಿಚಾರಕ್ಕೆ ಶುರುವಾದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ. ಪುನೀತ್ ಎಂಬ ಎಳೆನೀರು ವ್ಯಾಪಾರಿ ಗೆದ್ದ ಹಣವನ್ನ ಕೇಳಿದಕ್ಕೆ ದೊಣ್ಣೆ ಹಾಗೂ ಕಟ್ಟಿಗೆಯಿಂದ ಹೊಡೆದು ಕೊಂದು ಹಾಕಿದ್ದಾರೆ.
ಪುನೀತ್ ಸ್ನೇಹಿತ ದರ್ಶನ್ ಶರತ್ ಬಳಿ ಗುಜರಾತ್ ಹಾಗೂ ಚೆನ್ನೈ ತಂಡಗಳ ನಡುವಣ ಕ್ವಾಲಿಫಯರ್ ಮ್ಯಾಚ್ ಗೆ ಬೆಟ್ಟಿಂಗ್ ಕಟ್ಟಿದ್ದ, ದರ್ಶನ್ ಚೆನ್ನೈ ಪರ ಬೆಟ್ ಕಟ್ಟಿದ್ದರೆ, ಇತ್ತ ಶರತ್ ಗುಜರಾತ್ ಟೈಟನ್ ಪರ ಬೆಟ್ಟಿಂಗ್ ಕಟ್ಟಿದ್ದ. ಕೊನೆಗೆ ಚೆನ್ನೈ ತಂಡ ಗೆದ್ದಿತ್ತು. ಹಾಗಾಗಿ ದರ್ಶನ್ ಗೆ ಶರತ್ 11 ಸಾವಿರ ಹಣ ನೀಡಬೇಕಿತ್ತು.
ಆದ್ರೆ ಕೊಟ್ಟ ಮಾತಿನಂತೆ ಬೋರಾಪುರ ಗ್ರಾಮದ ಶರತ್ ಹಣ ನೀಡಿರಲಿಲ್ಲ. ಹಾಗಾಗಿ ಸಂಜೆ ದರ್ಶನ್ ಹಾಗೂ ಶರತ್ ನಡುವೆ ಕಿರಿಕ್ ಶುರುವಾಗಿತ್ತು. ಮಾತಿಗೆ ಮಾತು ಬೆಳೆದು ದರ್ಶನ್ ಗೆ ಶರತ್ ಹಲ್ಲೆ ನಡೆಸಿದ್ದ. ಈ ವಿಚಾರವನ್ನ ದರ್ಶನ್ ತನ್ನ ಗೆಳೆಯ ಪುನೀತ್ ಗೆ ತಿಳಿಸಿದ್ದ.
ಪುನೀತ್ ಸಂಜೆ ಎಳೆನೀರು ವ್ಯಾಪಾರ ಮುಗಿಸಿ ಕೊಂಡು ಮನೆಗೆ ಬಂದಿದ್ದ, ರೊಚ್ಚಿಗೆದ್ದ ಪುನೀತ್ ಶರತ್ ಬಳಿ ಹೋಗಿ ನ್ಯಾಯ ಪಂಚಾಯಿತಿ ನಡೆಸಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಶರತ್ ಮತ್ತು ಗ್ಯಾಂಗ್ ಪುನೀತ್ ತಲೆಗೆ ಕಟ್ಟಿಗೆ ಹಾಗೂ ದೊಣ್ಣೆಯಿಂದ ಹಲ್ಲೆ ನಡೆಸಿದೆ. ಪರಿಣಾಮ ಪುನೀತ್ ಅಸುನೀಗಿದ್ದಾನೆ.
ಇನ್ನು ಹಲ್ಲೆಗೊಳಗಾದ ಪುನೀತ್ ನನ್ನು ಕೆ.ಎಂ. ದೊಡ್ಡಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಗಿತ್ತು, ಅಲ್ಲಿಂದ ಮುಂದೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನೆ ಮಾಡಲಾಯ್ತು. ಆದರೂ ಚಿಕಿತ್ಸೆ ಫಲಿಸದೆ ಪುನೀತ್ ಸಾವನ್ನಪ್ಪಿದ.
ಇದೀಗ ಮದ್ದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಶರತ್ ಹಾಗೂ ಆತನ ಸ್ನೇಹಿತರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.
ಇದನ್ನು ಓದಿ: Udupi: ಮನೆ ಕೆಲಸದವಳ ಆರೈಕೆಗೆ ಮನಸೋತ ಶ್ವಾನ! ಮಾಲಿಕರನ್ನು ಬಿಟ್ಟು ಆಕೆಯ ಹಿಂದೆಯೇ ಬಂದು ಬಸ್ ಏರಿತು!!
