Home » ಮಂಗಳೂರು : KSRTC ಹುದ್ದೆಗೆ ನೇಮಕಾತಿ ಕುರಿತು ಸುಳ್ಳು ಪ್ರಕಟಣೆ | ದೂರು ದಾಖಲು

ಮಂಗಳೂರು : KSRTC ಹುದ್ದೆಗೆ ನೇಮಕಾತಿ ಕುರಿತು ಸುಳ್ಳು ಪ್ರಕಟಣೆ | ದೂರು ದಾಖಲು

by ಹೊಸಕನ್ನಡ
0 comments

ಜನರನ್ನು ಮಂಗ ಮಾಡಿ ಹಣ ದೋಚುವ ನಾನಾ ಮಾರ್ಗಗಳನ್ನು ಜನರು ತಿಳಿದುಕೊಂಡಿದ್ದು, ಅದರಲ್ಲಿ ಈಗ ಹೊಸ ಕಂಪೆನಿಯ ಹೆಸರಿನಲ್ಲಿ ಇಲ್ಲವೆ ಏಜೆನ್ಸಿ ನೆಪದಲ್ಲಿ ಕೆಲಸ ಕೊಡಿಸುವ ನೆಪ ಹೇಳಿಕೊಂಡು ಜನರನ್ನು ಮೋಸ ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಜನರು ಅದನ್ನು ನಂಬಿ ಅವರು ಕೇಳಿದಷ್ಟು ಹಣ ಸುರಿದು ನೀರಲ್ಲಿ ಹೋಮ ಮಾಡಿದಂತೆ ಹಣ ಕಳೆದುಕೊಂಡ ಮೇಲೆ ಸತ್ಯ ಬಯಲಾಗುವ ಅನೇಕ ಪ್ರಕರಣಗಳು ವರದಿಯಾಗುತ್ತಲೇ ಇರುತ್ತವೆ.

ಇದೇ ರೀತಿಯ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಮಂಗಳೂರು ಕೆಎಸ್‌ಆರ್‌ಟಿಸಿಯಲ್ಲಿ ಚಾಲಕ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿಸಿ ನೇಮಕಾತಿ ನಡೆಸುವ ಸಲುವಾಗಿ ನಕಲಿ ಪ್ರಕಟಣೆಯನ್ನೂ ಕೂಡ ನೀಡಿ ಸಾರ್ವಜನಿಕರನ್ನು ಯಾಮಾರಿಸಿ ಹಣ ವಸೂಲಿ ಮಾಡಿ ವಂಚನೆ ಮಾಡಿರುವ ಪ್ರಕರಣ ವರದಿಯಾಗಿದೆ.

ಹುದ್ದೆಗೆ ನೇಮಕಾತಿಗೆ ಅರ್ಜಿ ಸಲ್ಲಿಸಲು ಪತ್ರಿಕೆಯೊಂದರಲ್ಲಿ ಸುಳ್ಳು ಪ್ರಕಟನೆ ನೀಡಿ, ಸಾರ್ವಜನಿಕರಿಗೆ ನಕಲಿ ನೌಕರಿ ಆಮಿಷವೊಡ್ಡಿ ಹಣ ಸಂಗ್ರಹಿಸಿ ವಂಚಿಸಲು ಯತ್ನಿಸಿರುವ ಬಗ್ಗೆ ನಗರದ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.

ನ.11ರಂದು ಪತ್ರಿಕೆಯೊಂದರಲ್ಲಿ, ‘ಮ್ಯಾನ್ ಪವರ್ ರಿಕ್ರೂಟ್‌ಮೆಂಟ್ ಏಜೆನ್ಸಿ(ಎನ್‌ಜಿಒ) ಬಾಳೆಗುಂಡಿ ಸದನ ಕೆ.ಆರ್.ಪುರಂ ಮುಖ್ಯರಸ್ತೆ, ಮೊದಲನೆ ಮಹಡಿ ಶಿವಮೊಗ್ಗ ಎಂಬ ಸಂಸ್ಥೆಯ ಹೆಸರಿನಲ್ಲಿ ಪ್ರಕಟಣೆ ನೀಡಲಾಗಿದೆ. ಕೆಎಸ್‌ಆರ್‌ಟಿಸಿ ಮಂಗಳೂರು ಡಿಪೋದಲ್ಲಿ 250 ಹುದ್ದೆಗಳು, ಪುತ್ತೂರು ವಿಭಾಗದಲ್ಲಿ 200 ಹುದ್ದೆಗಳು, ಚಾಮರಾಜ ನಗರ ವಿಭಾಗದಲ್ಲಿ 100 ಹುದ್ದೆಗಳು ಸೇರಿದಂತೆ ಒಟ್ಟು 650 ಡ್ರೈವರ್ ಹುದ್ದೆಗಳಿಗೆ ಅಭ್ಯರ್ಥಿಗಳು ಬೇಕಾಗಿದ್ದು, ಪ್ರತಿ ಅಭ್ಯರ್ಥಿಗಳು ಬಯೋಡಾಟಾದೊಂದಿಗೆ 1,000 ರೂ. ಅರ್ಜಿ ಶುಲ್ಕದ ಡಿಡಿಯನ್ನು ಮತ್ತು 10,000 ರೂ. ಡಿಡಿಯನ್ನು ನೇಮಕಾತಿ ಅರ್ಜಿಯೊಂದಿಗೆ ಸಲ್ಲಿಸಬೇಕು ಎಂದು ಪ್ರಕಟಣೆ ನೀಡಲಾಗಿದೆ.

ನೇಮಕಾತಿ ತಿರಸ್ಕೃತಗೊಂಡಾಗ 10,000 ರೂ. ಹಿಂದಿರುಗಿಸಲಾಗುತ್ತದೆ. ಜೊತೆಗೆ ನೇಮಕಾತಿಯ ಒಟ್ಟು ಶುಲ್ಕ ಒಬ್ಬರಿಗೆ 25,000 ರೂ. ಮಾತ್ರ ವಾಗಿದ್ದು, 15,000 ರೂ.ಗಳನ್ನು ನೇಮಕಾತಿ ಪತ್ರ ಪಡೆಯುವ ಸಂದರ್ಭ ನೀಡಬೇಕು ಎಂಬುದಾಗಿ ಪತ್ರಿಕಾ ಪ್ರಕಟಣೆಯಲ್ಲಿ ನೀಡಲಾಗಿದೆ. ಆದರೆ, ಈ ಬಗ್ಗೆ ಕೆಎಸ್‌ಆರ್‌ಟಿಸಿ ಬೆಂಗಳೂರು ಕೇಂದ್ರ ಕಚೇರಿ ಹಾಗೂ ವಿಭಾಗಗಳಿಂದ ಯಾವುದೇ ಪ್ರಕಟಣೆ ಹೊರಡಿಸಿಲ್ಲ ಎಂದು ತಿಳಿದು ಬಂದಿದೆ.

ಆರೋಪಿಗಳು ಕೆಎಸ್‌ಆರ್‌ಟಿಸಿ ಹೆಸರಿನಲ್ಲಿ ದುರ್ಬಳಕೆ ಸಾರ್ವಜನಿಕರಿಂದ ನಕಲಿ ನೌಕರಿ ಕೊಡಿಸುವ ನೆಪದಲ್ಲಿ ಹಣ ಲೂಟಿ ಮಾಡಿ ವಂಚಿಸುವ ಉದ್ದೇಶದಿಂದ ಸುಳ್ಳು ಪ್ರಕಟಣೆ ನೀಡಿದ್ದು ಅಲ್ಲದೆ, ಕೆಎಸ್‌ಆರ್‌ಟಿಸಿ ಹೆಸರನ್ನು ದುರ್ಬಳಕೆ ಮಾಡಿರುವ ಕುರಿತಾಗಿ ಮಂಗಳೂರು ನಗರದ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದೆ.

You may also like

Leave a Comment