ಮಂಗಳೂರು: ಆರನೇ ತರಗತಿಯ ವಿದ್ಯಾರ್ಥಿನಿಯೋರ್ವಳು ತನ್ನ ಸಹಪಾಠಿಯೊಂದಿಗೆ ಸೇರಿ ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ನೀಡಿದ್ದಕ್ಕೆ ಶಿಕ್ಷಕಿಯೋರ್ವರ ನೀರಿನ ಬಾಟಲಿಗೆ ಅವಧಿ ಮುಗಿದ ಮಾತ್ರೆಗಳನ್ನು ಹಾಕಿ ಸೇಡು ತೀರಿಸಿಕೊಂಡ ಘಟನೆಯೊಂದು ಉಳ್ಳಾಲ ಖಾಸಗಿ ಶಾಲೆಯಲ್ಲಿ ನಡೆದಿದೆ. ಈ ಸೇಡು ತೀರಿಸುವ ಭರದಲ್ಲಿ ನೀರು ಕುಡಿದ ಇಬ್ಬರು ಶಿಕ್ಷಕಿಯರು ಅಸ್ವಸ್ಥಗೊಂಡಿರುವ ಘಟನೆಯೊಂದು ನಡೆದಿದೆ.
ಯುನಿಟ್ ಟೆಸ್ಟ್ ಗಣಿತ ವಿಷಯದಲ್ಲಿ ಆರನೇ ತರಗತಿ ವಿದ್ಯಾರ್ಥಿನಿಯೋರ್ವಳು ಕಡಿಮೆ ಅಂಕ ಪಡೆದಿದ್ದಳು. ಸರಿಯಿದ್ದ ಉತ್ತರಕ್ಕೆ ಅಂಕ ನೀಡಿಲ್ಲ ಎಂದು ವಿದ್ಯಾರ್ಥಿನಿಯ ಮನಸ್ಸಿನಲ್ಲಿತ್ತು. ಹಾಗಾಗಿ ಶಿಕ್ಷಕಿಯ ವಿರುದ್ಧ ಸೇಡು ತೀರಿಸಲು ಈಕೆ ಸಮಯ ಕಾಯುತ್ತಿದ್ದಳು.
ಹಾಗಾಗಿ ತನ್ನ ಸಹಪಾಠಿಯೊಂದಿಗೆ ಸೇರಿ ತಾನು ತಂದಿದ್ದ ಅವಧಿಮೀರಿದ ಮಾತ್ರೆಗಳನ್ನು ಗಣಿತ ಶಿಕ್ಷಕಿ ಬಳಸುತ್ತಿದ್ದ ನೀರಿನ ಬಾಟಲಿಗೆ ಹಾಕಿದ್ದಾಳೆ.
ಇದ್ಯಾವುದರ ಅರಿವಿರದ ಗಣಿತ ಶಿಕ್ಷಕಿ ತಾನು ತಂದಿದ್ದ ನೀರಿನ ಬಾಟಲಿಯ ನೀರನ್ನು ಕುಡಿದು ಅಸ್ವಸ್ಥಗೊಂಡಿದ್ದಾರೆ. ಇದೇ ನೀರನ್ನು ಕುಡಿದ ಮತ್ತೋರ್ವ ಶಿಕ್ಷಕಿ ಕೂಡಾ ನೀರು ಕುಡಿದಿದ್ದು, ಅವರ ಮುಖ ಊದಿಕೊಂಡಿದೆ. ನಂತರ ಅನುಮಾನ ಬಂದು ನೀರಿನ ಬಾಟಲಿ ಪರಿಶೀಲಿಸಿದಾಗ ಅದರಲ್ಲಿ ಮಾತ್ರೆಗಳು ಕರಗಿರುವುದು ಕಂಡು ಬಂದಿದೆ. ಹಾಗೆನೇ ಸಿಸಿಟಿವಿ ಕೂಡಾ ಗಮನಿಸಿದಾಗ ವಿದ್ಯಾರ್ಥಿನಿಯರು ಮಾಡಿದ ಕೆಲಸ ಬಹಿರಂಗ ಗೊಂಡಿದೆ.
ವಿದ್ಯಾರ್ಥಿನಿಯರ ಈ ಕೆಲಸಕ್ಕೆ ನಿಜಕ್ಕೂ ಶಿಕ್ಷಕರು-ರಕ್ಷಕರು ಗಾಬರಿಗೊಂಡಿದ್ದಾರೆ. ಇಂತಹ ಕೃತ್ಯ ಮಾಡಿದ ವಿದ್ಯಾರ್ಥಿನಿಯರನ್ನು ಶಾಲಾಡಳಿತವು ತರಾತುರಿಯಲ್ಲಿ ಟಿಸಿ ಕೊಟ್ಟು ಡಿಬಾರ್ ಮಾಡಲು ಮುಂದಾಗಿರುವ ಕುರಿತು ವರದಿಯಾಗಿದೆ. ಪೊಲೀಸ್ ದೂರು ದಾಖಲು ಮಾಡಿಲ್ಲ.
