Mangalore: ಸಾರ್ವಜನಿಕ ಶಾಂತಿಭಂಗಗೊಳಿಸುವಂತಹ ಪ್ರಚೋದನಕಾರಿ ಸಂದೇಶವನ್ನು ಪ್ರಕಟ ಮಾಡಿದ ಆರೋಪದ ಮೇರೆಗೆ ಪೊಲೀಸ್ ಇಲಾಖೆಯ ಸೂಚನೆಯ ಅನ್ವಯ ಒಂದು ಫೇಸ್‌ಬುಕ್ ಪುಟ ಹಾಗೂ ನಾಲ್ಕು ಇನ್‌ಸ್ಟಾಗ್ರಾಂ ಪೇಜ್‌ಗನ್ನು ನಿಷ್ಕ್ರಿಯ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ʼವಿಎಚ್‌ಪಿ_ಬಜರಂಗದಳ_ಅಶೋಕನಗರʼ, ‘ಶಂಖನಾದʼ, ʼ_ಡಿಜೆ_ಭರತ್_2008’, ‘ಕರಾವಳಿ_ಅಫಿಷಿಯಲ್ʼ ಎಂಬ ಇನ್ಸ್ಟಾಗ್ರಾಂ ಪುಟಗಳನ್ನು ಹಾಗೂ ʼಆಶಿಕ್ ಮೈಕಾಲʼ ಫೇಸ್‌ಬುಕ್ ಪುಟವನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ವಿಎಚ್‌ಪಿ ಬಜರಂಗದಳ ಅಶೋಕನಗರ’, ‘ಶಂಖನಾದ’ ಇನ್‌ಸ್ಟಾಗ್ರಾಂ ಪುಟಗಳ ವಿರುದ್ಧ ಉರ್ವ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(1) ಮತ್ತು 353(2) (ಸುಳ್ಳು ಮಾಹಿತಿ ಅಥವಾ ಸುಳ್ಳು ಸುದ್ದಿ ಹರಡುವುದು) ಅಡಿ ಎಫ್‌ಐಆರ್ ದಾಖಲಾಗಿತ್ತು. *_ಡಿಜೆ_ಭರತ್_2008′ ಇನ್‌ಸ್ಟಾಗ್ರಾಂ ಪುಟದ ವಿರುದ್ಧ ಕಾವೂರು ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 353 (1) ಮತ್ತು 353(2) ಅಡಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು.’
‘ಕರಾವಳಿ_ಅಫಿಷಿಯಲ್’ ಇನ್‌ಸ್ಟಾಗ್ರಾಂ ಪುಟದ ವಿರುದ್ಧ ನಗರ ದಕ್ಷಿಣ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 353(2), ಸೆಕ್ಷನ್ 351(3) (ಜೀವ ಬೆದರಿಕೆ) ಹಾಗೂ ಸೆಕ್ಷನ್ 196ರ (ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆಗಳ ಆಧಾರದಲ್ಲಿ ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಮೂಡಿಸುವುದು) ಅಡಿ ಎಫ್‌ಐಆರ್ ದಾಖಲಾಗಿತ್ತು. ‘ಆಶಿಕ್ ಮೈಕಾಲ’ ಪೇಸ್ ಬುಕ್ ಪುಟದ ವಿರುದ್ಧ ಬರ್ಕೆ ಠಾಣೆಯಲ್ಲಿ ಬಿಎನ್‌ಎಸ್ 353(2)ರ ಅಡಿ ಎಫ್‌ಐಆರ್ ದಾಖಲಾಗಿತ್ತು’ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಹಿಂದೆಯೇ ಮಂಗಳೂರು ಪೊಲೀಸ್ ಕಮಿಷನರೇಟ್‌ನ ಶಿಫಾರಸಿನ ಮೇಲೆ ಎರಡು ಇನ್‌ಸ್ಟಾಗ್ರಾಂ ಪುಟಗಳನ್ನು ನಿಷ್ಕ್ರಿಯ ಮಾಡಲಾಗಿತ್ತು. ಒಟ್ಟು ಆರು ಇನ್‌ಸ್ಟಾಗ್ರಾಂ ಹಾಗೂ ಒಂದು ಫೇಸ್‌ಬುಕ್ ಪುಟ ನಿಷ್ಕ್ರಿಯಗೊಳಿಸಲಾಗಿದೆ.
