Udupi: ತಪ್ಪಾಗಿ ನೀಡಿದ್ದ ವೈದ್ಯಕೀಯ ವರದಿಯಿಂದ ವಿದೇಶದಲ್ಲಿ ಕೆಲಸ ಕಳೆದುಕೊಂಡ ಉಡುಪಿಯ ವ್ಯಕ್ತಿಗೆ ಹದಿಮೂರು ಲಕ್ಷ ರೂ ಪರಿಹಾರ ನೀಡುವಂತೆ ಜಿಲ್ಲಾ ಗ್ರಾಹಕ ನ್ಯಾಯಾಲಯ ಆದೇಶ ನೀಡಿದೆ.
ಉಡುಪಿಯ (Udupi) ಖಾಸಗಿ ಆಸ್ಪತ್ರೆಯಲ್ಲಿ ಹಿರಿಯ ಸ್ಟಾಫ್ ನರ್ಸ್ ಆಗಿರುವ 43 ವರ್ಷದ ಶಿವಕುಮಾರ್ ಶೆಟ್ಟಿಗಾರ್ ಅವರು ಈ ಫೆಬ್ರವರಿಯಲ್ಲಿ ಗಲ್ಫ್ ರಾಷ್ಟ್ರದ ಯುನೈಟೆಡ್ ಮೆಡಿಕಲ್ ರೆಸ್ಪಾನ್ಸ್ ಕಂಪನಿಯಲ್ಲಿ ಇಂಡಸ್ಟ್ರಿಯಲ್ ನರ್ಸ್ ಆಗಿ ಆಯ್ಕೆಯಾಗಿದ್ದರು. ಅಲ್ಲಿ ವೈದ್ಯಕೀಯ ದಾಖಲೆ ನೀಡಬೇಕಾಗಿದ್ದ ಹಿನ್ನೆಲೆ ಮಂಗಳೂರಿನ ರಾಷ್ಟ್ರೀಯ ಸಿಟಿ ಸ್ಕ್ಯಾನರ್ ಮತ್ತು ಡಯಾಗ್ನೋಸ್ಟಿಕ್ ಸೆಂಟರ್‌ನಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದ್ದರು.
ಅದರಲ್ಲಿ ಅವರಿಗೆ ಹೆಪಟೈಟಿಸ್ ಸಿ ಪಾಸಿಟಿವ್ ಇದೆ ಎಂದು ತಪ್ಪಾಗಿ ವರದಿ ನೀಡಲಾಗಿತ್ತು. ಇದರಿಂದ ಗಲ್ಫ್ ನಲ್ಲಿ ಸಿಕ್ಕಿದ್ದ ಉದ್ಯೋಗಕ್ಕೆ ಇವರು ರಿಜೆಕ್ಟ್ ಆದರು. ಮಣಿಪಾಲದಲ್ಲಿ ಟೆಸ್ಟ್ ಮಾಡಿಸಿದಾಗ ಹೆಪಟೈಟಿಸ್ ಸಿ ನೆಗೆಟಿವ್ ಬಂದಿದೆ.
ಲ್ಯಾಬ್ ಎಡವಟ್ಟಿನಿಂದ ಕೆಲಸ ಕಳೆದುಕೊಂಡ ಶೆಟ್ಟಿಗಾರ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅವರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು. ಇದೀಗ ಆ ಪ್ರಯೋಗಾಲಯದ ನರ್ಸ್ ಗೆ 45 ದಿನದಲ್ಲಿ 13.49 ಲಕ್ಷ ರೂಗಳನ್ನು ಪಾವತಿಸಲು ಸೂಚಿಸಿದೆ. ತಡವಾದರೆ ಅಥವಾ ತಪ್ಪಿದ್ದಲ್ಲಿ ಶೇ. 6ರಷ್ಟು ಬಡ್ಡಿ ಅನ್ವಯವಾಗುತ್ತದೆ ಎಂದು ಎಚ್ಚರಿಸಿದೆ.
ಇದನ್ನೂ ಓದಿ: Highcourt: ಕನಿಷ್ಠ ವಿದ್ಯುತ್ ಶುಲ್ಕಕ್ಕೆ ತೆರಿಗೆ ವಿಧಿಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು
