Home » Eshwar Khandre: ಧರ್ಮಸ್ಥಳ ಪ್ರಕರಣ – ಬಿಜೆಪಿಯಿಂದಲೇ ಅನಾಮಿಕ ದೂರದಾರನ ಸೃಷ್ಟಿ, ಈಶ್ವರ ಖಂಡ್ರೆ ಗಂಭೀರ ಆರೋಪ!

Eshwar Khandre: ಧರ್ಮಸ್ಥಳ ಪ್ರಕರಣ – ಬಿಜೆಪಿಯಿಂದಲೇ ಅನಾಮಿಕ ದೂರದಾರನ ಸೃಷ್ಟಿ, ಈಶ್ವರ ಖಂಡ್ರೆ ಗಂಭೀರ ಆರೋಪ!

0 comments

Eshwar Khandre: ಶ್ರೀ ಕ್ಷೇತ್ರ ಧರ್ಮಸ್ಥಳದ ಸುತ್ತಮುತ್ತ ಕಾಡಿನಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದಾಗಿ (Mass burial case) ಹೇಳಿರುವ ಅನಾಮಿಕನ ದೂರಿನ ಮೇರೆಗೆ ಎಸ್​ಐಟಿ ತನಿಖೆ ಪ್ರಗತಿಯಲ್ಲಿದೆ. ಉತ್ಖನನವೂ ನಡೆಯುತ್ತಿದೆ. ಈ ವಿಚಾರ ಸದ್ಯ ರಾಜಕೀಯ ಕೆಸರೆರಚಾಟಕ್ಕೆ ದಾರಿಯಾಗಿದೆ. ಧರ್ಮಸ್ಥಳದ ಕುರಿತು ಇಷ್ಟೊಂದು ಅಪಪ್ರಚಾರ ಮಾಡುತ್ತಿದ್ದರು ಕೂಡ ಅಂಥವರನ್ನು ಯಾಕೆ ಬಂಧಿಸಲಿಲ್ಲ ಎಂದು ಬಿಜೆಪಿ ಆಡಳಿತ ಪಕ್ಷದ ವಿರುದ್ಧ ಕಿಡಿ ಕಾರಿದೆ. ಇದರ ನಡುವೆಯೇ ಅನಾಮಿಕ ದೂರದಾರನನ್ನು ಬಿಜೆಪಿಯ ಸೃಷ್ಟಿಸಿದೆ ಎಂದು ಸಚಿವ ಈಶ್ವರ ಖಂಡ್ರೆ ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಬೀದರ್‌ನಲ್ಲಿ ಮಾತನಾಡಿದ ಅವರು, ಧರ್ಮಸ್ಥಳದಲ್ಲಿ ಶವಗಳನ್ನು ಹೂತು ಹಾಕಿದ್ದೇನೆ ಎಂದು ದೂರು ನೀಡಿರುವಂತಹ ಅನಾಮಿಕ ವ್ಯಕ್ತಿಯನ್ನು ಭಾರತೀಯ ಜನತಾ ಪಾರ್ಟಿಯೇ (ಬಿಜೆಪಿ) ಸೃಷ್ಟಿ ಮಾಡಿದೆ. ಈ ಘಟನೆಯನ್ನು ರಾಜಕೀಯಗೊಳಿಸಲು ಬಿಜೆಪಿ ‘ಧರ್ಮಸ್ಥಳ ಚಲೋ’ ಹೋರಾಟ ಹಮ್ಮಿಕೊಂಡಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಆರೋಪ ಮಾಡಿದ್ದಾರೆ.

ಅಲ್ಲದೆ ರಾಜಕೀಯ ಬಣ್ಣ ಬಳಿಯುವ ಉದ್ದೇಶ ಕಾಂಗ್ರೆಸ್‌ಗಿಲ್ಲ, ಆದರೆ ಬಿಜೆಪಿ ತನ್ನ ಸ್ವಾರ್ಥಕ್ಕಾಗಿ ಇಂತಹ ರಾಜಕೀಯ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು. ಧಾರ್ಮಿಕ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿಜವಾದ ಭಕ್ತಿ ಮತ್ತು ನಂಬಿಕೆಯಿದೆ. ದೇಶದ ಎಲ್ಲಾ ದೇವಾಲಯಗಳು, ಮಸೀದಿಗಳು, ಚರ್ಚ್‌ಗಳು ಮತ್ತು ಬೌದ್ಧ ವಿಹಾರಗಳು ಸೇರಿದಂತೆ ಎಲ್ಲ ಸಮುದಾಯಗಳ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ. ನಮ್ಮ ದೇಶದಲ್ಲಿರುವ ಎಲ್ಲ ಗಿರಿಜಾ ಘರ್, ಬೌದ್ಧ ಧರ್ಮ ಮತ್ತು ಇಸ್ಲಾಂ ಸಮುದಾಯಗಳ ಕ್ಷೇತ್ರಗಳನ್ನೂ ಸಹ ಅವರ ನಂಬಿಕೆಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡಿಕೊಂಡು ಬಂದಿದೆ. ಅಲ್ಲದೆ, ತಮಗೆ ಧರ್ಮಸ್ಥಳ ಮತ್ತು ಮಂಜುನಾಥ ಸ್ವಾಮಿಯ ಮೇಲೆ ಅಪಾರ ನಂಬಿಕೆಯಿದ್ದು, ಹಲವು ಬಾರಿ ಅಲ್ಲಿಗೆ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದೇನೆ. ಕಾಂಗ್ರೆಸ್‌ನಿಂದ ಹಿಂದೂಗಳ ಪವಿತ್ರ ಧಾರ್ಮಿಕ ಕ್ಷೇತ್ರವಾಗಿರುವ ಧರ್ಮಸ್ಥಳಕ್ಕೆ ಕಳಂಕ ತರುವ ಪ್ರಶ್ನೆಯೇ ಇಲ್ಲ ಎಂದು ಖಂಡ್ರೆ ಹೇಳಿದರು.

You may also like