ಮನುಷ್ಯರಿಗೆ ಆರೋಗ್ಯ ಸಮಸ್ಯೆ ಆದರೆ ಕೂಡಲೇ ಆಸ್ಪತ್ರೆಗೆ ಹೋಗಿ ವೈದ್ಯರಿಗೆ ಸಮಸ್ಯೆ ಹೇಳಿ ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಅದೇ ರೀತಿ ಇಲ್ಲೊಂದು ಮಂಗ (Monkey) ನೇರವಾಗಿ ಪಶು ಆಸ್ಪತ್ರೆಗೆ (veterinary hospital) ಹೋಗಿದ್ದು, ತನಗಾದ ಸಮಸ್ಯೆಯನ್ನು ವೈದ್ಯರಿಗೆ ತಾನೆ ಸನ್ನೆ ಮೂಲಕ ತೋರಿಸಿದೆ. ಅಲ್ಲದೆ ಬಳಿಕ ಚಿಕಿತ್ಸೆ ಪಡೆದುಕೊಂಡು ಹೋಗಿದೆ. ಮಂಗನ ಈ ವರ್ತನೆ ಕಂಡು ಎಲ್ಲರೂ ಶಾಕ್ ಆಗಿದ್ದಾರೆ.
ಹೌದು, ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲ್ಲೂಕಿನ ಗಡೂರು ಗ್ರಾಮದ ಪಶು ಆಸ್ಪತ್ರೆಯಲ್ಲಿ ನಡೆದ ಈ ಘಟನೆ ಸಾಕ್ಷಿಯಾಗಿದೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಂಗ, ಆಸ್ಪತ್ರೆ ಬಳಿ ಇದ್ದ ಬೈಕ್ ಮೇಲೆ ಮಲಗಿ ಕೈ ಸನ್ನೆ ಮೂಲಕ ತನ್ನ ನೋವಿನ ವೇದನೆಯನ್ನು ತೋಡಿಕೊಂಡಿದೆ. ಇದನ್ನು ಗಮನಿಸಿದ ಸಿಬ್ಬಂದಿ ವೈದ್ಯರನ್ನು ಕರೆದಿದ್ದಾರೆ. ಸ್ಥಳದಲ್ಲೇ ಇದ್ದ ಪಶುವೈದ್ಯಕೀಯ ಪರಿವೀಕ್ಷಕ ಜಿ.ಜಿ.ಬಿಲ್ಲೊರ ತಪಾಸಣೆ ಮಾಡುವಾಗ ಕೋತಿ ತನಗಾದ ಗಾಯದ ಬಗ್ಗೆ ತಾನೆ ತೋರಿಸಿದೆ
ಮಂಗ ಪಶು ವೈದ್ಯರಿಗೆ ತನ್ನ ಗುದದ್ವಾರದ ಕಡೆ ಕೈ ತೋರಿಸಿ, ತನ್ನ ಸಮಸ್ಯೆಯನ್ನು ಹೇಳಿಕೊಂಡಿದೆ. ತನಗಾದ ವೇದನೆಯನ್ನು ಕೈ ಸನ್ನೆ ಮೂಲಕ ಕಪಿರಾಯ ತೋರಿಸಿದ್ದಾನೆ. ತಕ್ಷಣ ಕೋತಿಯ ನೋವನ್ನು ಅರ್ಥ ಮಾಡಿಕೊಂಡ ಪಶುವೈದ್ಯ ಜಿ.ಜಿ. ಬಿಲ್ಲೋರ ಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಯನ್ನು ಪಡೆದ ಮಂಗ ನಂತರ ಅಲ್ಲಿಂದ ಹೊರಟು ಹೋಯಿತು. ಈ ದೃಶ್ಯವನ್ನು ಕಂಡ ಸ್ಥಳೀಯರು ಹುಬ್ಬೇರಿಸಿದ್ದು, ಕೋತಿಯ ಬುದ್ಧಿವಂತಿಕೆಯನ್ನು ಕೊಂಡಾಡಿದ್ದಾರೆ.
