Mangaluru : ಮಹಿಳೆಯೋರ್ವರು ನಾಲ್ಕು ಮಕ್ಕಳಿಗೆ ಜನುಮ ನೀಡಿರುವಂತಹ ಅಪರೂಪದ ಘಟನೆಯೊಂದು ಮಂಗಳೂರಿನ ಫಾ|ಮುಲ್ಲರ್ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು, ನವೆಂಬರ್ 9ರಂದು ಮಂಗಳೂರಿನ(Mangaluru) ಫಾ|ಮುಲ್ಲರ್ ಆಸ್ಪತ್ರೆಯ ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ತೆಲಂಗಾಣ ಮೂಲದ, ಸದ್ಯ ಮಂಗಳೂರಿನಲ್ಲಿ ಪತಿ ತೇಜ ಜತೆ ನೆಲೆಸಿರುವ ಬನೊತ್ ದುರ್ಗಾರವರು ಮಕ್ಕಳಿಗೆ ಜನ್ಮ ನೀಡಿದ ತಾಯಿ. ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸಲಾಗಿದೆ. ಹುಟ್ಟಿದ ನಾಲ್ಕೂ ಶಿಶುಗಳಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಆರೈಕೆ ನೀಡಲಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ತಾಯಿ ತಂದೆ ತಮ್ಮ ಮಕ್ಕಳೊಂದಿಗೆ ಮನೆಗೆ ತೆರಳಿದ್ದಾರೆ.
ಹುಟ್ಟಿರುವ ಮಕ್ಕಳಲ್ಲಿ ಎರಡು ಗಂಡಾದರೆ ಎರಡು ಹೆಣ್ಣು, ಈ ಅಪರೂಪದ ವಿದ್ಯಮಾನದ ಕುರಿತು ಆಸ್ಪತ್ರೆಯವರು ವಿವರ ನೀಡಿದ್ದಾರೆ. ಹುಟ್ಟುವಾಗ ಮಕ್ಕಳ ತೂಕ 1.1 ಕೆಜಿ, 1.2 ಕೆಜಿ, 800 ಗ್ರಾಮ್ ಹಾಗೂ 900 ಗ್ರಾಂ ಇದ್ದು ಕಳೆದೆರಡು ತಿಂಗಳಿನಿಂದ ನವಜಾತ ಶಿಶುಗಳ ವಾರ್ಡ್‌ನಲ್ಲಿ ಆರೈಕೆ ನೀಡಲಾಗಿತ್ತು.
ಇನ್ನು ಈ ದಂಪತಿಗೆ ಆರಂಭದಿಂದಲೂ ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ದಿನನಿತ್ಯದ ಅಲ್ಟ್ರಾಸೌಂಡ್ ಸಮಯದಲ್ಲಿ ಕ್ವಾಡ್ರುಪ್ಲೆಟ್‌ಗಳ ರೋಗನಿರ್ಣಯ, ಪ್ರಸವಪೂರ್ವ ಆರೈಕೆಯನ್ನು ಸಲಹೆಗಾರ ಪ್ರಸೂತಿ ಮತ್ತು ಸ್ತ್ರೀರೋಗತಜ್ಞರಾದ ಡಾ. ಜೋಯ್ಲೀನ್ ಡಿ’ಅಲ್ಮೇಡಾ ನಡೆಸಿದ್ದರು. ದಂಪತಿಗಳು ಪ್ರತಿ ಹಂತದಲ್ಲೂ ಬೆಂಬಲಿತರಾಗಿದ್ದಾರೆ ಎಂದು ಖಚಿತಪಡಿಸಿಕೊಂಡಿದ್ದರು. ಆರಂಭದಲ್ಲೇ ಈ ಬಗ್ಗೆ ತಿಳಿಸಲಾಗಿತಾದರೂ ಅಪಾಯಗಳ ಹೊರತಾಗಿಯೂ, ಅವರು ಗರ್ಭಧಾರಣೆಯೊಂದಿಗೆ ಮುಂದುವರಿಯಲು ನಿರ್ಧರಿಸಿದ್ದರು ಎನ್ನಲಾಗಿದೆ.
ಅಲ್ಲದೆ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾ. ಜಾಯ್ಲಿನ್ ಡಿಅಲ್ಮೇಡಾ ಅವರು ಪ್ರತಿ ಹಂತದಲ್ಲಿಯೂ ದಂಪತಿಗೆ ಧೈರ್ಯವನ್ನು ತುಂಬಿದ್ದರು. ಆರಂಭದಲ್ಲಿ ದಂಪತಿ ಸಂತಸದ ನಡುವೆ ಆತಂಕಕ್ಕೆ ಒಳಗಾಗಿದ್ದರೂ, ಅಪಾಯದ ಸಾಧ್ಯತೆಯ ನಡುವೆಯೂ ನಾಲ್ಕು ಮಕ್ಕಳನ್ನು ಉಳಿಸಿ ಕೊಳ್ಳುವ ನಿರ್ಧಾರ ಮಾಡಿದ್ದರು. 30 ವಾರಗಳ ಗರ್ಭಾವಸ್ಥೆಯ ಬಳಿಕ ನ. 9ರಂದು ಬನೊತ್ ದುರ್ಗಾ ಅವರಿಗೆ ಇಲೆಕ್ಟಿವ್ ಸಿಸೇರಿಯನ್ ಮೂಲಕ ಹೆರಿಗೆ ಪ್ರಕ್ರಿಯೆ ನಡೆಸಲಾಗಿದೆ.
30 ವಾರಗಳ ಗರ್ಭಾವಸ್ಥೆಯಲ್ಲಿ, ದಂಪತಿಗಳು ನವೆಂಬರ್ 9 ರಂದು ತಾಯಿಯ ಹಿಂದಿನ ಸಿಸೇರಿಯನ್ ಇತಿಹಾಸದ ಕಾರಣದಿಂದಾಗಿ ಸವಾಲನ್ನು ಎದುರಿಸುವಂತೆ ಆಯಿತು. ಆದರೆ, ಈಗ ಬಾನೋತ್ ಎರಡು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನವಜಾತ ಶಿಶುಗಳಿಗೆ ಯಾವುದೇ ಸಮಸ್ಯೆ ಆಗಬಾರದು ಎಂದು ವೈದ್ಯರು ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.
ಈ ಹೆರಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೈನೆಕಾಲಜಿಸ್ಟ್ ಡಾ|ಜೋಯ್ಲಿನ್ ಅಲ್ಮೇಡ ಮಾತನಾಡಿ ಸಾಮಾನ್ಯವಾಗಿ ಐವಿಎಫ್ ಕೃತಕ ಗರ್ಭಧಾರಣೆಯಲ್ಲಿ ಈ ರೀತಿ ಒಂದಕ್ಕಿಂತ ಹೆಚ್ಚು ಮಕ್ಕಳ ಜನನವಾಗುವುದು ಹೆಚ್ಚು, ಆದರೆ ಈ ಪ್ರಕರಣ ಸಹಜ ಗರ್ಭಧಾರಣೆಯದ್ದಾಗಿದ್ದರಿಂದ ಇದು ವಿರಳ. ಈ ರೀತಿಯ ಹೆರಿಗೆ ಕ್ಲಿಷ್ಟಕರ ಹಾಗೂ ಅಪರೂಪ ಎಂದು ಹೇಳಲಾಗಿದೆ. ಅಂದಾಜು 7 ಲಕ್ಷದಲ್ಲಿ ಒಂದು ಈ ರೀತಿ ನಾಲ್ಕು ಮಕ್ಕಳ ಜನನ ಸಂಭವಿಸುತ್ತದೆ. ಈ ರೀತಿಯ ಹೆರಿಗೆಯು ಪ್ರಸವ ಪೂರ್ವ ಹಾಗೂ ಕಡಿಮೆ ತೂಕದಿಂದ ಕೂಡಿರುವ ಕಾರಣ, ಹೆರಿಗೆಯು ಅತ್ಯಂತ ಕ್ಲಿಷ್ಟಕರವಾಗಿರುತ್ತದೆ. ಹೀಗಾಗಿ ನಾವು ದಂಪತಿಗಳಿಗೆ ಧೈರ್ಯವನ್ನು ತುಂಬಿದ್ದೆವು ಎಂದಿದ್ದಾರೆ.
