New Delhi: ಕಲ್ಯಾಣ ಕರ್ನಾಟಕದ ವೈದ್ಯಕೀಯ ಮೂಲಸೌಕರ್ಯ ಬಲಪಡಿಸಲು ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಬೇಕೆಂಬ ಬೇಡಿಕೆಗೆ ರಾಜ್ಯದ ಪರ ಬಿಜೆಪಿ ಸಂಸದ ಡಾ.ಸಿ.ಎನ್.ಮಂಜುನಾಥ್ ಅವರು ಸಂಸತ್‌ನಲ್ಲಿ ಧ್ವನಿ ಎತ್ತಿದರು. ಏಮ್ಸ್ ಬೇಡಿಕೆ ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮಂಜುನಾಥ್ ಮನವಿ ಮಾಡಿದರು.
ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಯಾಗಬೇಕು ಎಂಬ ಬಹು ವರ್ಷಗಳ ನಿರಂತರ ಬೇಡಿಕೆ ಬಗ್ಗೆ ಧ್ವನಿಗೂಡಿಸಿದ ಮಂಜುನಾಥ್ ಅವರಿಗೆ ರಾಯಚೂರು ಜನರ ಪರವಾಗಿ ಆ ಕ್ಷೇತ್ರದ ಸಂಸದ ಜಿ.ಕುಮಾರ್ ನಾಯಕ್ ಅವರು ಧನ್ಯವಾದವನ್ನು ಎಕ್ಸ್ ಮೂಲಕ ತಿಳಿಸಿದ್ದಾರೆ. ಮೊನ್ನೆಯಷ್ಟೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಏಮ್ಸ್ ವಿಚಾರ ಪ್ರಸ್ತಾಪಿಸಿ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆ ಸಂಬಂಧ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಏಮ್ಸ್‌ಗಾಗಿ ನಮ್ಮ ಸಂಸದರು ಕರ್ನಾಟಕ ರಾಜ್ಯದ ಸ್ವಾಭಿಮಾನ ಹಾಗೂ ಗೌರವ ಉಳಿಸಲು ಹೋರಾಟ ಮಾಡುತ್ತಿದ್ದಾರೆ. ಹತ್ತಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್ ಆರಂಭಿಸಬೇಕು ಎಂದು ಪ್ರಸ್ತಾಪ ಮಾಡಲಾಗಿತ್ತು. ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿದ್ದಾಗಲೂ ಪ್ರಸ್ತಾವನೆ ಸಲ್ಲಿಸಲಾಗಿತ್ತು. ರಾಯಚೂರಿನಲ್ಲಿ ಜಾಗ ನೀಡುವುದು ಸೇರಿದಂತೆ ಎಲ್ಲ ರೀತಿಯ ಸಹಕಾರ ನೀಡಲು ರಾಜ್ಯ ಸರ್ಕಾರ ಮಾಡಿತ್ತು. ಆದರೆ ಕೇಂದ್ರ ನಮಗೆ ಸಹಕಾರ ನೀಡುತ್ತಿಲ್ಲ ಎಂದು ಡಿಕೆಶಿ ದೂರಿದ್ದರು.
