Mangaluru : ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯ ನೂತನ ಕಟ್ಟಡ ಪ್ರಜಾಸೌಧದ ಉದ್ಘಾಟನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಅವರು ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಅವರಿಗೆ ಮಾತಿನಲ್ಲೇ ತಿವಿದಿದು, ಇತಿಹಾಸದ ಪಾಠ ಮಾಡಿದ್ದಾರೆ
ಹೌದು, ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಡಳಿತ ಕೇಂದ್ರವಾದ ʼಪ್ರಜಾ ಸೌಧʼ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ವೇದವ್ಯಾಸ್ ಕಾಮತ್ ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು. ಈ ಯೋಜನೆ ಇಲ್ಲದೇ ಇದ್ದಿದ್ದರೆ ಇಂದು ಈ ಕೆಲಸ ಆಗುತ್ತಲೇ ಇರಲಿಲ್ಲ ಎಂದು ಹೇಳಿದರು. ಇದನ್ನೆಲ್ಲ ಆಲಿಸುತ್ತಾ ಕುಳಿತಿದ್ದ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಕಾಮತ್‌ಗೆ ತಿರುಗೇಟು ನೀಡಿದರು.
ವೇದವ್ಯಾಸ ಕಾಮತ್ ಅವರು ಮಾತನಾಡಿದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು “ಮಿಸ್ಟರ್ ಕಾಮತ್. ನನ್ನ ಸೌಭಾಗ್ಯ ಏನೆಂದರೆ ಈ ಕಟ್ಟಡಕ್ಕೆ ಗುದ್ದಲಿ ಪೂಜೆ ಮಾಡಿದ್ದೂ ನಾನೇ, ಇವತ್ತು ಉದ್ಘಾಟನೆ ಮಾಡಿದ್ದು ನಾನೇ. ನಿಮ್ಮ ಭಾಷಣದಲ್ಲಿ ಸ್ಮಾರ್ಟ್ ಸಿಟಿ ಪ್ರಧಾನಿ ಮೋದಿಯವರ ಕನಸು ಎಂದು ನೀವು ಹೇಳಿದ್ರಿ. ಅದು ನಿಜ. ಆದರೆ, ನಾವೂ ರಾಜ್ಯ ಸರ್ಕಾರವೂ ಕೂಡ ಸ್ಮಾರ್ಟ್ ಸಿಟಿಯ ಯೋಜನೆಗಳಿಗೆ ಶೇ.50ರಷ್ಟು ಅನುದಾನ ಕೊಡ್ತಿದ್ದೇವೆ ಎನ್ನುವುದು ಗೊತ್ತಿದೆಯಲ್ವಾ? ನಾಲಕ್ಕು ವರ್ಷ ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ರಲ್ವಾ. ಆಗ ಯಾಕೆ ಇದನ್ನು ಮಾಡ್ಲಿಲ್ಲ? ಆಗಲೂ ಸ್ಮಾರ್ಟ್ ಸಿಟಿ ಯೋಜನೆ ಇತ್ತು. ಆಗ ಯಾಕೆ ಖರ್ಚು ಮಾಡಲಿಲ್ಲ? ಆಗ ಖರ್ಚು ಮಾಡಿದ್ದಿದ್ದರೆ ಇಷ್ಟು ದಿನ ಬೇಕಿತ್ತಾ? ಎಂದು ಪ್ರಶ್ನೆಸಿದ್ದಾರೆ.
ಅಲ್ಲದೆ ʼ2015ರಲ್ಲಿ ಇದಕ್ಕೆ ಶಂಕುಸ್ಥಾಪನೆಯಾಯಿತು. ಇದಕ್ಕೆ ಕಾರಣ ರಮಾನಾಥ್ ರೈ ಅವರು. ಇದಕ್ಕೆ ಅಡಿಗಲ್ಲು ಹಾಕಲು ಕಾರಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ್ ರೈ ಅವರು ನನ್ನನ್ನು ಕರೆದುಕೊಂಡು ಬಂದು ಮಂಗಳೂರಿನಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿ ಆಗಲೇಬೇಕು ಅಂತ ಹೇಳಿ ನನ್ನ ಮೇಲೆ ಒತ್ತಡ ಹಾಕಿ ಅವತ್ತು ಮೊದಲ 45 ಕೋಟಿ ರೂಪಾಯಿಗಳಿಗೆ ಮಂಜೂರಾತಿಯನ್ನು ಕೊಟ್ಟೆವು. ಹೀಗಾಗಿ ಇತಿಹಾಸ ತಿಳಿದುಕೊಳ್ಳಿ. ಇತಿಹಾಸವನ್ನು ತಿರುಚಿ ಹೇಳ್ಬೇಡಿ. ಯಾವತ್ತೂ ಸುಳ್ಳು ಹೇಳಬಾರದು. ಜನ ನಂಬಬೇಕಲ್ಲಾ. ರಾಜಕೀಯ ಮಾಡೋಣ. ಆದರೆ, ಅಭಿವೃದ್ಧಿ ಕೆಲಸದಲ್ಲಿ ರಾಜಕೀಯ ಬೇಡ….” ಎಂದು ಸಿದ್ದರಾಮಯ್ಯ ಅವರು ಹೇಳುತ್ತಿದ್ದಂತೆ ಕಾರ್ಯಕ್ರಮದಲ್ಲಿ ನೆರೆದಿದ್ದ ಪಕ್ಷದ ಕಾರ್ಯಕರ್ತರು ಹರ್ಷೋದ್ಗಾರ ವ್ಯಕ್ತಪಡಿಸಿದರು.
