Kateelu: ಕರಾವಳಿಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕಟೀಲಿನಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ಈ ಜಾತ್ರೆಗೆ ಖಾಸಗಿ ಬಸ್ ಮಾಲೀಕರು ಒಬ್ಬರು ಇದೀಗ ಉಚಿತ ಬಸ್ ಸೇವೆಯನ್ನು ನೀಡುವ ಮೂಲಕ ಮೆಚ್ಚುಗೆ ಪಾತ್ರವಾಗಿದ್ದಾರೆ.
ಹೌದು, ‘ಗೋಲ್ಡನ್’ ಹೆಸರಿನ ಬಸ್‌ಗಳ ಮಾಲಕರಾಗಿರುವ ಶರೀಫ್ ಎಂಬವರು ಶನಿವಾರ ದಿನಪೂರ್ತಿ ತಮ್ಮ ಏಳೂ ಬಸ್‌ಗಳಲ್ಲಿ ಎಲ್ಲಾ ಪ್ರಯಾಣಿಕರಿಗೂ ಉಚಿತ ಪ್ರಯಾಣದ ಸೌಕರ್ಯವನ್ನು ಒದಗಿಸಿದ್ದಾರೆ.
ಅಂದಹಾಗೆ ಪ್ರತೀ ಶುಕ್ರವಾರ ಕಟೀಲು ದೇವರಿಗೆ ಹೂವಿನ ಪೂಜೆಯ ಸೇವೆ ಮಾಡಿಸುವ ಶರೀಫ್ ಅವರು ಕಳೆದ ನವರಾತ್ರಿ ಜಾತ್ರೆಯ ಸಂದರ್ಭದಲ್ಲೂ ಕೂಡಾ ಕಟೀಲು ದೇವಳದ ಭಕ್ತರಿಗೆ ತಮ್ಮ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ಒದಗಿಸಿದ್ದರು. ಜಾತ್ರೆಯ ಸಂದರ್ಭ ಭಕ್ತರಿಗೆ ಉಚಿತ ಪ್ರಯಾಣದ ಸೇವೆ ಒದಗಿಸಿದ ಶರೀಫ್ ಅವರನ್ನು ಶ್ರೀ ದೇವಳದ ಅರ್ಚಕರಾದ ಅನಂತ ಆಸ್ರಣ್ಣ ಅವರು ಅಭಿನಂದಿಸಿದರು. ಈ ಸಂದರ್ಭ ಮಾತನಾಡಿದ ಶರೀಫ್, ತಾನು ಚಿಕ್ಕಂದಿನಿಂದಲೂ ಕಟೀಲಿನ ಭಕ್ತ. ಕಟೀಲಮ್ಮನ ಸೇವೆ ಮಾಡಲು ಖುಷಿಯಾಗುತ್ತದೆ ಎಂದು ತಿಳಿಸಿದ್ದಾರೆ.
