Mangaluru : ಮಂಗಳೂರಿನ ಕುಡುಪುವಿನಲ್ಲಿ ಕೇರಳ ಮೂಲದ ಮುಸ್ಲಿಂ ಯುವಕ ಮೊಹಮ್ಮದ್ ಅಶ್ರಫ್ ಮೇಲೆ ಗುಂಪು ಹಲ್ಲೆ ನಡೆಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಅನುಪಮ್ ಅರ್ಗವಾಲ್ ಸ್ಪೋಟಕ ವಿಚಾರ ಒಂದನ್ನು ಬಿಚ್ಚಿಟ್ಟಿದ್ದಾರೆ.
ಪಾಕಿಸ್ತಾನದ ಪರ ಘೋಷಣೆ ಕೂಗಿದ್ದಕ್ಕಾಗಿ ಮುಸ್ಲಿಂ ಯುವಕನ ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಆಯುಕ್ತ ಅನುಪಮ್ ಅವರು ಮೊಹಮ್ಮದ್ ಅಶ್ರಫ್ “ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ನಿರ್ದಿಷ್ಟ ಸಾಕ್ಷಿ ಸಿಕ್ಕಿಲ್ಲ” ಎಂದಿದ್ದಾರೆ.
ಹೌದು, ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ 20 ಜನರನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡಿರುವವರಿಗಾಗಿ ಹುಡುಕಾಡುತ್ತಿದ್ದೇವೆ. ಘಟನಾ ಸ್ಥಳದಲ್ಲಿದ್ದ 15 ಜನರಿಗೆ ನೋಟಿಸ್ ಜಾರಿ ಮಾಡಿದ್ದೇವೆ. ಘಟನಾ ಸ್ಥಳದಲ್ಲಿ ಸಿಸಿಟಿವಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಟ್ಟಾರೆ “ಪಾಕಿಸ್ತಾನ ಪರ ಘೋಷಣೆ ಕೂಗಿದ್ದಕ್ಕೆ ನಿರ್ದಿಷ್ಟ ಸಾಕ್ಷಿ ಸಿಕ್ಕಿಲ್ಲ” ಎಂದಿದ್ದಾರೆ.
ಅಲ್ಲದೆ “ದಾಳಿಗೆ ಕಾರಣವೇನು ಎಂಬುದನ್ನು ದೃಢೀಕರಿಸಲು ಪ್ರಕರಣದಲ್ಲಿ ನಮಗೆ ಸರಿಯಾದ ಪ್ರತ್ಯಕ್ಷದರ್ಶಿ ಇಲ್ಲ. ಪ್ರತ್ಯಕ್ಷದರ್ಶಿಗಳು ಒಬ್ಬ ವ್ಯಕ್ತಿ(ಪ್ರಮುಖ ಆರೋಪಿ ಸಚಿನ್) ಮತ್ತೊಬ್ಬ ವ್ಯಕ್ತಿಯನ್ನು ಹೊಡೆಯುವುದನ್ನು ನೋಡಿದ್ದೇವೆ ಮತ್ತು ಅವನು ಆ ವ್ಯಕ್ತಿಯನ್ನು ಏಕೆ ಹೊಡೆಯುತ್ತಿದ್ದಾನೆಂದು ಅವರಿಗೆ ಗೊತ್ತಿಲ್ಲ ಎಂದಿದ್ದಾರೆ. ಹಲ್ಲೆ ನಡೆಸುತ್ತಿದ್ದ ಸಚಿನ್ ಜತೆ ಆತನ ಸ್ನೇಹಿತರು ಸೇರಿಕೊಂಡರು” ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಅಗರ್ವಾಲ್ ತಿಳಿಸಿದರು.
