Congress: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪವನ್ ಖೇರಾ ಅವರು ಮೋದಿ ಸರಕಾರವನ್ನು “ಸಿಂದೂರ್ ಕಾ ಸೌದಾಗರ್'(ಸೌಭಾಗ್ಯದ ವ್ಯಾಪಾರಿ) ಎಂದು ಕರೆಯುವ ಮೂಲಕ ವಿವಾದಕ್ಕೆ ನಾಂದಿ ಹಾಡಿದೆ.

ಹೌದು, ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೇರಾ ಅವರು, “ಪಾಕ್‌ಗೆ ನಮ್ಮ ಕಾರ್ಯಾಚರಣೆ ಕುರಿತು ಆರಂಭದಲ್ಲೇ ಮಾಹಿತಿ ನೀಡಿದ್ದೆವು ಎಂದು ಸಚಿವ ಜೈಶಂಕರ್ ಅವರೇ ಸಂದರ್ಶನವೊಂದರಲ್ಲಿ ಒಪ್ಪಿಕೊಂಡಿದ್ದಾರೆ. ಇದನ್ನು ರಾಜತಾಂತ್ರಿಕತೆ ಎನ್ನುವುದಿಲ್ಲ. ಬದಲಿಗೆ ಬೇಹುಗಾರಿಕೆ ಎನ್ನಲಾಗುತ್ತದೆ. ನರೇಂದ್ರ ಮೋದಿ ಸರಕಾರವು “ಸಿಂದೂರ್ ಕಾ ಸೌದಾಗರ್’ (ಸೌಭಾಗ್ಯದ ವ್ಯಾಪಾರಿ) ಆಗಿ ಬದಲಾಗಿದೆ’ ಎಂದು ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಇನ್ನು ರಾಹುಲ್ ಗಾಂಧಿ ಅವರು, ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ಮಾಡಲಿದೆ ಎಂದು ಪಾಕಿಸ್ತಾನಕ್ಕೆ ಮಾಹಿತಿ ನೀಡಲಾಗಿತ್ತು ಎಂಬ ಜೈಶಂಕರ್ ಹೇಳಿಕೆ ಇರುವ ವೀಡಿಯೋವನ್ನು ಹಂಚಿಕೊಂಡು, ಆಪರೇಷನ್ ಸಿಂದೂರ ಬಗ್ಗೆ ಪಾಕಿಸ್ಥಾನಕ್ಕೆ ಮಾಹಿತಿ ನೀಡಿದ್ದನ್ನು ಜೈಶಂಕರ್ ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ. ಅವರಿಗೆ ಈ ಅಧಿಕಾರ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ವಿದೇಶಾಂಗ ಇಲಾಖೆಯು, ಇದು ತಪ್ಪು ಮಾಹಿತಿ. ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಲಾಗಿತ್ತೇ ಹೊರತು ಮಾಹಿತಿ ಅಲ್ಲ ಎಂದು ಹೇಳಿತ್ತು.
