Mangalore: ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಅಂಚೆ ಕಚೇರಿಗಳಲ್ಲಿ ಕಳೆದ ಎರಡು ದಿನಗಳಿಂದ ಸ್ಪೀಡ್ ಪೋಸ್ಟ್ ಸೇವೆ ಸ್ಥಗಿತಗೊಂಡಿದೆ. ಇದರ ಜೊತೆಗೆ ಹೊಸ ಸಾಫ್ಟ್‌ವೇರ್ ಅಳವಡಿಕೆ ನಂತರ ಸಮಸ್ಯೆ ಕಾಣಿಸಿಕೊಂಡಿದ್ದು, ಸ್ಪೀಡ್ ಪೋಸ್ಟ್ ಸೌಲಭ್ಯ ದೊರಕದೆ ಗ್ರಾಹಕರು ತೊಂದರೆಗೊಳಗಾಗಿದ್ದಾರೆ.
ಅಂಚೆ ಇಲಾಖೆ ಅಭಿವೃದ್ಧಿ ಪಡಿಸಿದ ಐಟಿ 2.0 ಹೊಸ ಸಾಫ್ಟ್‌ವೇರನ್ನು ಜೂನ್ ಕೊನೆ ವಾರದಲ್ಲಿ ಕರ್ನಾಟಕ ಅಂಚೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಬಳಕೆಗೆ ಕೇಂದ್ರ ಕಚೇರಿ ಅವಕಾಶ ನೀಡಿತ್ತು. ಜೂ.21 ರಿಂದ ನಾಲ್ಕು ದಿನಗಳ ಕಾಲ ಹೊಸ ಸಾಫ್ಟ್‌ವೇರ್ ಅಳವಡಿಕೆ ಕಾರಣ ಅಂಚೆ ಕಚೇರಿ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ನಂತರ ಎಲ್ಲವೂ ಸರಿ ಹೋಗಿತ್ತು
ಕಳೆದ ಎರಡು ದಿನಗಳಿಂದ ಅಂಚೆ ಇಲಾಖೆಯ ಐಟಿ-2.0 ಸಾಫ್ಟ್‌ವೇರ್‌ನಲ್ಲಿ ತೊಂದರೆ ಕಾಣಿಸಿಕೊಂಡಿದ್ದು, ಶುಕ್ರವಾರದಿಂದ ಏಕಾಏಕಿ ಸಾಫ್ಟ್‌ವೇರ್ ತಾಂತ್ರಿಕ ತೊಂದರೆ ನೀಡಿದೆ. ಶನಿವಾರ ಕೂಡಾ ಸಮಸ್ಯೆ ಬಗೆಹರಿದಿಲ್ಲ. ಹೀಗಾಗಿ ಎರಡು ದಿನವೂ ರಾಜ್ಯಾದ್ಯಂತ ಸ್ಪೀಡ್ ಪೋಸ್ಟ್ ಸೇವೆ ಸಾಧ್ಯವಾಗಿಲ್ಲ.
ಸ್ಪೀಡ್ ಪೋಸ್ಟ್ ಲಕೋಟೆ ಸ್ವೀಕರಿಸಬೇಕಾದರೆ ಡಿಜಿಟಲ್ ಅರ್ಜಿ ಭರ್ತಿ ಮಾಡಿ ಅದಕ್ಕೆ ವಿಳಾಸದ ಸ್ಟಿಕ್ಕರ್ ಅಂಟಿಸಬೇಕು. ಆದರೆ ಅಂಚೆ ಇಲಾಖೆಯ ಕಂಪ್ಯೂಟರ್‌ನಲ್ಲಿ ಅರ್ಜಿ ಹಾಗೂ ಸ್ಟಿಕ್ಕರ್ ಕಾಣಿಸುತ್ತಿಲ್ಲ. ಹಿಂದೆ ಕೈ ಬರಹದ ಮೂಲಕ ಸ್ವೀಕೃತಿ ಆಗುತ್ತಿತ್ತು. ಈಗ ಡಿಜಿಟಲ್ ಮೂಲಕ ಸ್ವೀಕೃತಿ ನಡೆಸಲಾಗುತ್ತದೆ.
