Kochi: ನಾವು ಮದುವೆಯಾಗುವಂತಹ ನಮ್ಮ ಸಂಗಾತಿ ಸುಂದರವಾಗಿ, ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ, ನೋಡಲು ಚಂದವಾಗಿ, ಆರೋಗ್ಯವಾಗಿ ಇರಬೇಕು ಎಂಬುದು ಹಲವರ ಆಸೆ. ಮದುವೆ ನಿಶ್ಚಯವಾದ ಬಳಿಕವೂ ಕೆಲವರಲ್ಲಿ ಸಮಸ್ಯೆಗಳು ಕಂಡು ಬಂದಾಗ ಕೆಲವು ಮದುವೆಗಳೇ ಮುರಿದು ಬಿದ್ದಿರುವಂತಹ ಘಟನೆಗಳು ನಡೆದಿವೆ. ಹೀಗಿರುವಾಗ ತಾನು ಮದುವೆಯಾಗವ ಹುಡುಗಿ ಆಕ್ಸಿಡೆಂಟ್ ನಲ್ಲಿ ಗಂಭೀರವಾಗಿ ಗಾಯಗೊಂಡರು ಕೂಡ ವರ ಆಸ್ಪತ್ರೆಗೆ ತೆರಳಿ ಆಕೆಯ ಕುತ್ತಿಗೆಗೆ ತಾಳಿ ಕಟ್ಟಿದ್ದಾನೆ. ವರನ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಕೇರಳದ ಆಲಪ್ಪುಳದ ಅವ್ನಿ ಎಂಬ ಹುಡುಗಿ ಮತ್ತು ತುಂಬೋಲಿಯ ವಿ.ಎಂ. ಶರೋನ್ ಎಂಬ ಹುಡುಗನ ಮದುವೆ ಶುಕ್ರವಾರ ಮಧ್ಯಾಹ್ನಕ್ಕೆ ನಿಗದಿಯಾಗಿತ್ತು. ಅಂದುಕೊಂಡಂತೆ ಎಲ್ಲವೂ ಚೆನ್ನಾಗಿಯೇ ನಡೆಯುತ್ತಿತ್ತು. ಆದರೆ ವಧು ಅವ್ನಿ ವಧುವಿನ ಮೇಕಪ್ ಗಾಗಿ ಬೇರೆ ಹಳ್ಳಿಗೆ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತದಲ್ಲಿ ಸಿಲುಕಿದ್ದಳು. ಆಕೆಯ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ಹುಡುಗಿಯನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಯಿತು. ಬಳಿಕ ವಧು ಅವ್ನಿಗೆ ಬೆನ್ನುಮೂಳೆಯ ಗಾಯವಾಗಿದ್ದು, ಅವರನ್ನು ಎರ್ನಾಕುಲಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಪಘಾತದ ಮಾಹಿತಿ ಪಡೆಯುತ್ತಿದ್ದಂತೆ ಶಾರೋನ್ ಕುಟುಂಬವೂ ಆಸ್ಪತ್ರೆಗೆ ಬಂದಿದೆ. ಅದೇ ದಿನ ಮಧ್ಯಾಹ್ನ 12.15-12.30ರವರೆಗೆ ಮುಹೂರ್ತವಿದ್ದ ಕಾರಣ ಎರಡೂ ಕುಟುಂಬದವರು ಆಸ್ಪತ್ರೆಯಲ್ಲಿಯೇ ಮದುವೆ ಮಾಡಲು ತೀರ್ಮಾನಿಸಿ, ಆಸ್ಪತ್ರೆಯ ಆಡಳಿತಕ್ಕೆ ಮನವಿ ಮಾಡಿದ್ದಾರೆ. ಇದನ್ನು ಮನ್ನಿಸಿದ ಆಡಳಿತ ಮತ್ತು ವೈದ್ಯರು, ಅವನಿಗೆ ಯಾವುದೇ ತೊಂದರೆಯಾಗದಂತೆ ತುರ್ತು ಚಿಕಿತ್ಸಾ ವಿಭಾಗದಲ್ಲಿಯೇ ಮದುವೆ ಸೆಟ್‌ಅಪ್ ಮಾಡಿ ವಿವಾಹ ನೆರವೇರಿಸಿದ್ದಾರೆ.
