U T Khadar: ಧರ್ಮಸ್ಥಳದಲ್ಲಿ ಶವ ಹೂತುಹಾಕಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಿದೆ. ಇದೀಗ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ತನಿಖೆ ಮೂಲಕ ಸತ್ಯಾಂಶ ಹೊರಬರಲಿ ಎಂಬ ಆಶಯ ವ್ಯಕ್ತಪಡಿಸಿದರು.
“ಯಾವುದು ಸತ್ಯವೋ ಅದು ಬಹಿರಂಗವಾಗಬೇಕು. ಸಮರ್ಪಕ ತನಿಖೆ ಮೂಲಕ ಎಲ್ಲವೂ ತಿಳಿಯುತ್ತದೆ. ಯಾವ ಕಾನೂನು ಕ್ರಮ ಬೇಕೋ ಅದು ಅನುಸರಿಸಲಾಗುತ್ತದೆ. ತನಿಖೆ ನಡೆಯುತ್ತಿರುವಾಗಲೇ ತೀರ್ಪು ನೀಡುವುದು ಸರಿಯಲ್ಲ. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಬೇಕು. ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಕ್ಕೆ ಕಪ್ಪುಚುಕ್ಕೆ ತರುವ ಕೆಲಸ ಮಾಡಬಾರದು,” ಎಂದು ಸ್ಪೀಕರ್ ತಿಳಿಸಿದರು.
ಮುಂದುವರೆದು ಮಾತನಾಡಿ “ಹಣ, ಶ್ರಮ, ನಂಬಿಕೆಯ ಮೂಲಕ ಸಂಸ್ಥೆ ನಿರ್ಮಾಣವಾಗುತ್ತದೆ. ಅದರಿಂದ ಅನೇಕ ಜನರಿಗೆ ಇವತ್ತು ಉಪಯೋಗವಾಗುತ್ತಿದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಸತ್ಯಾಂಶ ಹೊರಬಂದು ಕಾನೂನು ಕ್ರಮ ಕೈಗೊಳ್ಳಬೇಕು. ತನಿಖೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕಾಗಿದೆ,” ಎಂದು ಹೇಳಿದರು.
