Home » Kodagu Rain: ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ – ಸಚಿವ ಎನ್.ಎಸ್.ಬೋಸರಾಜು. ಮಳೆಹಾನಿ ತಡೆಗೆ ಶಾಶ್ವತ ಪರಿಹಾರಕ್ಕೂ ಸೂಕ್ತ ಯೋಜನೆ ಅನುಷ್ಠಾನ

Kodagu Rain: ಕೊಡಗು ಮಳೆಹಾನಿ ಕುರಿತು ವರದಿಗೆ ಸೂಚನೆ – ಸಚಿವ ಎನ್.ಎಸ್.ಬೋಸರಾಜು. ಮಳೆಹಾನಿ ತಡೆಗೆ ಶಾಶ್ವತ ಪರಿಹಾರಕ್ಕೂ ಸೂಕ್ತ ಯೋಜನೆ ಅನುಷ್ಠಾನ

0 comments

Kodagu Rain: ಜಿಲ್ಲೆಯಲ್ಲಿ ಮಳೆಯಿಂದ ಆಗಿರುವ ಹಾನಿಗೆ ಸಂಬಂಧಿಸಿದಂತೆ ವರದಿ ಸಲ್ಲಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದ್ದು, ಈ ವರದಿ ಆಧಾರ ಮೇಲೆ ಜುಲೈ 2ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಕೊಡಗು ಜಿಲ್ಲಾ ಉಸ್ತುವಾರಿಯೂ ಆಗಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ತಿಳಿಸಿದರು.

ಕೊಡಗು ಜಿಲ್ಲೆಯಲ್ಲಿ ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ವೇಳೆ ಹಾರಂಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲವು ದಿನಗಳ ಕಾಲ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇತ್ತು. ಭಾರೀ ಮಳೆಯಿಂದ ರಸ್ತೆ, ಸೇತುವೆಗಳಿಗೆ ಹಾನಿಯಾಗಿದೆ. ಆದರೆ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದರಿಂದ ಪ್ರಾಣಹಾನಿ ಆಗಿಲ್ಲ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಮಳೆಯಾದರೆ ದಕ್ಷಿಣ ಕರ್ನಾಟಕ ಭಾಗಕ್ಕೆ ಹೆಚ್ಚು ಅನುಕೂಲವಾಗುತ್ತದೆ. ಆದರೆ, ಹೆಚ್ಚು ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿದೆ. ಕೆಡಿಪಿ ಸಭೆಯಲ್ಲಿ ಎಷ್ಟು ಮನೆ, ರಸ್ತೆ, ಸೇತುವೆಗಳು ಹಾನಿಯಾಗಿವೆ ಎಂಬ ಮಾಹಿತಿ ಪಡೆದು ತಕ್ಷಣದ ಪರಿಹಾರ ಕಾರ್ಯಕ್ಕೆ ಕೂಡಲೇ ಹಣ ಬಿಡುಗಡೆ ಮಾಡಲಾಗುವುದು. ಇದರ ಜತೆಗೆ ಶಾಶ್ವತ ಪರಿಹಾರಕ್ಕೆ ಏನು ಮಾಡಬೇಕು ಎಂಬ ಬಗ್ಗೆಯೂ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಈ ಹಿಂದೆ ಮಳೆಯಿಂದ ರಸ್ತೆ, ಸೇತುವೆಗಳು ಹಾನಿಗೊಳಗಾಗಿದ್ದರೆ ಹಣ ಬಿಡುಗಡೆಗೆ ಕೆಲವು ಮಾನದಂಡಗಳಿದ್ದವು. ಆದರೆ, ಇದೀಗ ಎಷ್ಟು ಹಾನಿಯಾಗಿದೆಯೋ ಅಷ್ಟು ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಆಗಿರುವ ಹಾನಿ ಕುರಿತಂತೆ ವರದಿ ಸಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅವರು ವರದಿ ಸಲ್ಲಿಸಿದ ಕೂಡಲೇ ಕಂದಾಯ ಸಚಿರು, ಇಲಾಖೆ ಕಾರ್ಯದರ್ಶಿಗಳು ಹಾಗೂ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಸೂಕ್ತ ಅನುದಾನ ಬಿಡುಗಡೆಗೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಕೊಡಗಿನ ಕುಶಾಲನಗರ ಮತ್ತು ಮೈಸೂರಿನ ಪಿರಿಯಾಪಟ್ಟಣ ತಾಲೂಕಿನ ಮಧ್ಯೆ ಸಂಪರ್ಕದ ವೇದಿಕೆಯಾಗಿದ್ದ ರಾಮಸ್ವಾಮಿ ಕಣವೆ ತೂಗು ಸೇತುವೆ ಮುಚ್ಚಿರುವುದರಿಂದ ಆಗುತ್ತಿರುವ ಸಮಸ್ಯೆ ಗಮನದಲ್ಲಿದೆ. ಶೀಘ್ರದಲ್ಲೇ ಸಚಿವ ಎಂ. ವೆಂಕಟೇಶ್ ಅವರ ಜತೆ ಮಾತನಾಡಿ ಸೇತುವೆಯನ್ನು ಮತ್ತೆ ಕಾರ್ಯಾರಂಭ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಈ ಸಂದರ್ಭದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜಾ, ಪೊಲೀಸ್ ವರಿಷ್ಠಾಧಿಕಾರಿ ರಾಮಾರಾಜನ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ;Telangana : ರೀಲ್ಸ್ ಹುಚ್ಚಿಗಾಗಿ ರೈಲ್ವೆ ಟ್ರ್ಯಾಕ್ ಮೇಲೆ ಕಾರು ಚಲಾಯಿಸಿ ಯುವತಿಯ ಹುಚ್ಚಾಟ – ತಡವಾದ ರೈಲು ಸಂಚಾರ

You may also like