GST: ಜಿಎಸ್‌ಟಿ ನೋಟಿಸ್ ಬಂದಿದೆ ಎಂಬ ಕಾರಣಕ್ಕೆ ವರ್ತಕರು ಡಿಜಿಟಲ್ ಪಾವತಿ ಗೇಟ್ ವೇಗಳ ಬಳಕೆ ನಿಲ್ಲಿಸಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು ಗೊಂದಲಗಳಿಗೆ ಸ್ಪಷ್ಟನೆ ನೀಡಿ, ಕೆಲ ಸೂಚನೆಗಳನ್ನೂ ನೀಡಿದೆ.
ಹೌದು, ಈ ಕುರಿತಂತೆ ವಾಣಿಜ್ಯ ತೆರಿಗೆ ಇಲಾಖೆಯ ಕೆಟಿಡಿ ಅಡಿಷನಲ್ ಕಮಿಷನರ್ ಚಂದ್ರಶೇಖರ್ ನಾಯ್ಕ್ ಅವರು ಮಾಹಿತಿ ಹಂಚಿಕೊಂಡಿದ್ದು, ಸಣ್ಣ ಸಣ್ಣ ವ್ಯಾಪಾರಿಗಳಿಗೂ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಿರುವುದು ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಇದೇ ಹೊತ್ತಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯು 40 ಲಕ್ಷದೊಳಗೆ ವಹಿವಾಟು ಆಗಿದ್ರೆ ನೋಂದಣಿ ಬೇಕಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಅಲ್ಲದೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 22 ರನ್ವಯ ಕೇವಲ ಸರಕುಗಳ ಪೂರೈಕೆದಾರರ ಸಮಗ್ರ ವಹಿವಾಟು ಹಣಕಾಸು ವರ್ಷದಲ್ಲಿ ನಗದು ರೂಪದಲ್ಲಾಗಲೀ, ಯು.ಪಿ.ಐ, ಪಿ.ಒ.ಒ.ಎಸ್ ಮೆಷಿನ್, ಬ್ಯಾಂಕ್ ಖಾತೆ ಹಾಗೂ ಇತರೆ ಯಾವುದೇ ವಿಧಾನಗಳಿಂದ 40 ಲಕ್ಷ ರೂ.ಗಳನ್ನು ಮೀರಿದರೆ ಅಥವಾ ಸೇವೆಗಳ ಪೂರೈಕೆದಾರರ ಸಮಗ್ರ ವಹಿವಾಟು ಒಂದು ಹಣಕಾಸು ವರ್ಷದಲ್ಲಿ 20 ಲಕ್ಷ ರೂ.ಗಳನ್ನು ಮೀರಿದರೆ ಅಂತಹ ವರ್ತಕರು ಜಿ.ಎಸ್.ಟಿ ನೋಂದಣಿ ಕಡ್ಡಾಯವಾಗಿರುತ್ತದೆ ಎಂದು ಹೇಳಿದ್ದಾರೆ.
ಜೊತೆಗೆ ಯಾವುದೇ ವ್ಯಾಪಾರಿಗಳು ತಮ್ಮ ವಾರ್ಷಿಕ ವಹಿವಾಟು 1.50 ಕೋಟಿ ರೂ.ಗಿಂತ ಕಡಿಮೆ ಇದ್ದಲ್ಲಿ ಜಿ.ಎಸ್.ಟಿ ಅಡಿ ನೋಂದಣಿಯನ್ನು ಪಡೆದು ರಾಜಿ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿಕೊಂಡು ವಹಿವಾಟಿನ ಮೇಲೆ ಶೇ 0.5 ಎಸ್.ಜಿ.ಎಸ್.ಟಿ ತೆರಿಗೆಯನ್ನು ಪಾವತಿಸಬಹುದು. ಆದರೆ, ನೋಂದಣಿ ಪಡೆಯದೇ ನೆಡೆಸಿರುವ ವಹಿವಾಟಿಗೆ ರಾಜಿ ತೆರಿಗೆ ಪದ್ಧತಿಯು ಅನ್ವಯಿಸುವುದಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: Maharastra: ಹಿಂದೂ, ಬೌದ್ಧ, ಸಿಖ್ ಬಿಟ್ಟು ಉಳಿದವರ SC ಪ್ರಮಾಣ ಪತ್ರ ರದ್ದು – ರಾಜ್ಯ ಸರ್ಕಾರ ಆದೇಶ!!
