Koppal: ದಕ್ಷಿಣ ಭಾರತದ ಮಹಾಕುಂಭ ಮೇಳವೆಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವವು 2026ರಲ್ಲಿ ಅತ್ಯಂತ ವೈಭವದಿಂದ ಆರಂಭಗೊಂಡಿದ್ದು, ಜನಸಂಖ್ಯೆ ಹಾಗೂ ದಾಸೋಹದಲ್ಲಿ ದಾಖಲೆಯನ್ನು ಬರೆದಿದೆ.
ಹೌದು, ಸೋಮವಾರ ನಡೆದ ಕೊಪ್ಪಳ ಗವಿಸಿದ್ದೇಶ್ವರ ಸ್ವಾಮಿಯ ರಥೋತ್ಸವದಲ್ಲಿ ಸುಮಾರು 8 ರಿಂದ 10 ಲಕ್ಷ ಭಕ್ತರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು. ಈ ಜಾತ್ರಾ ಮಹೋತ್ಸವಕ್ಕೆ ಉತ್ತರ ಪ್ರದೇಶದ ಕುಂಭಮೇಳದಂತೆ ಜನಸಾಗರವೇ ಹರಿದು ಬಂದಿತ್ತು. ಮೇಘಾಲಯ ರಾಜ್ಯಪಾಲ ಹೆಚ್.ಸಿ. ವಿಜಯಶಂಕರ್ ಅವರು ಧ್ವಜಾರೋಹಣ ಮಾಡುವ ಮೂಲಕ ವಿಧ್ಯುಕ್ತ ಚಾಲನೆ ನೀಡಿದ್ದು ಈ ವರ್ಷ ಜಾತ್ರೆಯ ವಿಶೇಷವಾಗಿತ್ತು.
ಅಜ್ಜನ ಜಾತ್ರೆ ಮಾತ್ರ ಪ್ರಸಿದ್ಧವಲ್ಲ, ಇಲ್ಲಿನ ದಾಸೋಹ ಕೂಡ ಜಗತ್ಪ್ರಸಿದ್ಧ. ಈ ಬಾರಿ ದಾಖಲೆ ಪ್ರಮಾಣದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಸರಿಸುಮಾರು 25 ಲಕ್ಷ ಜೋಳದ ರೊಟ್ಟಿ, 20 ಲಕ್ಷ ಮೈಸೂರು ಪಾಕ್, 500 ಕ್ವಿಂಟಾಲ್ ಮಾದಲಿ ಹಾಗೂ ಹತ್ತಾರು ಬಗೆಯ ಪಲ್ಯಗಳನ್ನ ಖುದ್ಧು ಭಕ್ತರೇ ವ್ಯವಸ್ಥೆ ಮಾಡಿದ್ದರು.
ಭಕ್ತರು ಒಂದು ವಾರ ಮುಂಚಿತವಾಗಿ ಜಾತ್ರೆಗೆ ಬರಲು ಆರಂಭಿಸಿದ್ದು, ಕಳೆದ ಎರಡು ತಿಂಗಳಿನಿಂದ ಅನೇಕ ಗ್ರಾಮಸ್ಥರು ಟ್ರ್ಯಾಕ್ಟರ್‌ಗಳು ಮತ್ತು ಮಿನಿ ಸರಕು ವಾಹನಗಳಲ್ಲಿ ಜೋಳದ ರೊಟ್ಟಿ, ಗೋಧಿ, ತೊಗರಿ ಬೇಳೆ, ಅಕ್ಕಿ ಮತ್ತು ತರಕಾರಿಗಳಂತಹ ಕಾಣಿಕೆಗಳನ್ನು ತಂದಿದ್ದಾರೆ. ಹಬ್ಬದ ಭಾಗವಾಗಿ, ಸಿಂಧನೂರು ವಿಜಯ್ ಮತ್ತು ಸ್ನೇಹಿತರ ಗುಂಪು ಈ ವರ್ಷ 10 ಲಕ್ಷ ಮೈಸೂರು ಪಾಕ್ ತಯಾರಿಸಿತು. ಕಳೆದ ಒಂದು ವಾರದಿಂದ ಮಠದ ಆವರಣದ ಮುಂದೆ ಹಾಕಲಾದ ನೂರಾರು ಮಳಿಗೆಗಳು ಉತ್ತಮ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸಿದ್ದು, ಅನೇಕ ಮಳಿಗೆಗಳ ಮಾಲೀಕರು ಸಂತೋಷ ವ್ಯಕ್ತಪಡಿಸಿದ್ದಾರೆ.
ಜಾತ್ರೆಯ ದಾಸೋಹಕ್ಕಾಗಿ ಈ ಕೆಳಗಿನ ಪದಾರ್ಥಗಳನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಲಾಗಿದೆ:
ರೊಟ್ಟಿ: ಒಟ್ಟು 18,38,000 ರೊಟ್ಟಿಗಳು ಸಿದ್ಧವಾಗಿವೆ.
ಮೈಸೂರ್ ಪಾಕ್: ಸಿಹಿ ಪ್ರಸಾದಕ್ಕಾಗಿ 175 ಕ್ವಿಂಟಲ್ ಮೈಸೂರ್ ಪಾಕ್ ಬಳಸಲಾಗುತ್ತಿದೆ.
ಮಾದಲಿ: ಬರೋಬ್ಬರಿ 467 ಕ್ವಿಂಟಲ್ ಮಾದಲಿಯನ್ನು ಸಿದ್ಧಪಡಿಸಲಾಗಿದೆ.
ಶೇಂಗಾ ಹೋಳಿಗೆ: 62 ಕ್ವಿಂಟಲ್ ಶೇಂಗಾ ಹೋಳಿಗೆಯನ್ನು ಭಕ್ತರಿಗಾಗಿ ತಯಾರಿಸಲಾಗಿದೆ.
ರವೆಉಂಡೆ: 47 ಕ್ವಿಂಟಲ್ ರವ ಉಂಡೆಗಳನ್ನು ಸಂಗ್ರಹಿಸಲಾಗಿದೆ.
ಬೂಂದಿ : 25 ಕ್ವಿಂಟಲ್ ಬೂಂದಿ ಪ್ರಸಾದಕ್ಕೆ ಲಭ್ಯವಿದೆ.
ಮಿರ್ಚಿ: ಜಾತ್ರೆ ಎಂದರೆ ಅಲ್ಲಿ ಮಿರ್ಚಿ ಇರಲೇಬೇಕು. ಭಕ್ತರ ಅಚ್ಚುಮೆಚ್ಚಿನ ಮಿರ್ಚಿ ತಯಾರಿಸಲು ಮಠವು ಭರ್ಜರಿ ತಯಾರಿ ನಡೆಸಿದೆ. ಸುಮಾರು 12 ಬ್ಯಾರಲ್ ಎಣ್ಣೆ ಮತ್ತು 25 ಕ್ವಿಂಟಲ್ ಹಿಟ್ಟನ್ನು ಬಳಸಿ ಒಟ್ಟು 6 ಲಕ್ಷ ಮಿರ್ಚಿಗಳನ್ನು ಸ್ಥಳದಲ್ಲೇ ತಯಾರಿಸುವ ಗುರಿ ಹೊಂದಲಾಗಿದೆ.
ಇದಲ್ಲದೆ ಜಿಲೇಬಿ (5 ಕ್ವಿಂಟಲ್), ಖರ್ಜೂರ (7 ಕ್ವಿಂಟಲ್), ಶಂಕರಪೋಳಿ (5 ಕ್ವಿಂಟಲ್), ಸೋಂ ಪಾಪಡಿ (155 ಕೆ.ಜಿ), ಬೆಲ್ಲದಚ್ಚು (8 ಕ್ವಿಂಟಲ್) ಮತ್ತು ಬಾದಾಮಿ ಪುರಿ (1 ಕ್ವಿಂಟಲ್) ಕೂಡ ದಾಸೋಹದ ಪಟ್ಟಿಯಲ್ಲಿ ಸೇರಿವೆ.
