Odisha train crash:ಭುವನೇಶ್ವರ: ಒಡಿಶಾ ಬಾಲಾ ಸೋರ್ ಭೀಕರ ರೈಲು (Odisha train crash) ದುರಂತದಲ್ಲಿ ಈವರೆಗೂ ಒಟ್ಟು 275 ಮಂದಿ ಮೃತರಾಗಿದ್ದು, ಅವರಲ್ಲಿ 174 ಹೆಚ್ಚು ಶವಗಳ ಗುರುತು ಪತ್ತೆಯಾಗಿದ್ದು, ಇನ್ನೂ 101 ದೇಹಗಳ ಮಾಹಿತಿಯೇ ದೊರೆತಿಲ್ಲ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.
ಕಳೆದ ಶುಕ್ರವಾರ ಒಡಿಶಾದ ಬಹನಾಗಾ ನಿಲ್ದಾಣದಲ್ಲಿ ಸಂಭವಿಸಿದ ಹೌರಾ ಚೆನ್ನೈ ಕೋರಮಂಡಲ್, ಯಶವಂತಪುರ ಹೌರಾ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಹಾಗೂ ಗೂಡ್ಸ್ ರೈಲುಗಳ ತ್ರಿವಳಿ ರೈಲು ಡಿಕ್ಕಿಯಲ್ಲಿ ಈವರೆಗೂ 275 ಮಂದಿ ಪ್ರಯಾಣಿಕರು ಜೀವ ಕಳೆದುಕೊಂಡು, 1050 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರ ದೇಹಗಳನ್ನು ಭುವನೇಶ್ವರದ ಆಸ್ಪತ್ರೆಗಳಲ್ಲಿ ಸೇರಿದಂತೆ ಸಮೀಪದ ಪಟ್ಟಣಗಳ ಹಲವು ಶವಾಗಾರಗಳಲ್ಲಿ ಇರಿಸಲಾಗಿದೆ. ಒಡಿಶಾ, ತಮಿಳುನಾಡು, ತೆಲಂಗಾಣ ಮತ್ತು ಇತರ ರಾಜ್ಯಗಳಿಂದ ಪ್ರಯಾಣಿಕರ ಸಂಬಂಧಿಕರು ತಮ್ಮವರ ಗುರುತು ಪತ್ತೆಗೆ ಆಗಮಿಸುತ್ತಿದ್ದಾರೆ. ಸಹಾಯವಾಣಿ ಹಾಗೂ ಕಂಟ್ರೋಲ್ ರೂಂಗಳನ್ನು ತೆರೆದು ಮಾಹಿತಿ ನೀಡಲಾಗಿದ್ದರೂ ಇನ್ನೂ 101 ಶವಗಳ ಗುರುತು ಪತ್ತೆಯಾಗಿಲ್ಲ ಎಂದು ಭುವನೇಶ್ವರ ವಿಭಾಗದ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ. ಆನ್ಲೈನ್ ಮೂಲಕ ತೀರಿಕೊಂಡವರ ಫೋಟೋ ಹಾಕಿ ಆಯಾ ಜಿಲ್ಲೆ/ರಾಜ್ಯಗಳಿಗೆ ಕಳಿಸಿ ಶವದ ವಾರಸುದಾರರನ್ನು ಪತ್ತೆ ಮಾಡುವ ಕಾರ್ಯ ನಡೆಯುತ್ತಿದೆ.
ರೈಲು ದುರಂತದಲ್ಲಿ ಗಾಯಗೊಂಡಿದ್ದವರಲ್ಲಿ ಬಹುತೇಕರು ಬಿಡುಗಡೆ ಆಗಿದ್ದಾರೆ. ಇನ್ನೂ 200ಕ್ಕೂ ಹೆಚ್ಚು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ನಡುವೆ ರೈಲ್ವೆ ನಿಲ್ದಾಣದಲ್ಲಿ ಡಿಕ್ಕಿಯಿಂದ ಹಾಳಾಗಿದ್ದ ಮಾರ್ಗ ದುರಸ್ತಿ ಕಾರ್ಯವೂ ಮುಕ್ತಾಯದ ಹಂತಕ್ಕೆ ಬಂದಿದ್ದು, ಇಂದಿನಿಂದಲೇ ಕೆಲ ರೈಲುಗಳ ಸಂಚಾರ ಪುನಾರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 275 ಬಲಿ ತೆಗೆದುಕೊಂಡ ಒಡಿಶಾ ಬಾಲಾಸೋರ್ ರೈಲು ದುರಂತ: ‘ ಅಪರಿಚಿತನ ‘ ನಿರ್ಲಕ್ಷ್ಯವೇ ಸಾವಿಗೆ ಕಾರಣ, ರೈಲ್ವೆ ಪೊಲೀಸರಿಂದ ಪ್ರಕರಣ
