Skill India: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಕೌಶಲ್ಯ ಹೊಂದಿರುವ ಅಭ್ಯರ್ಥಿಗಳಿಗೆ ಅತಿದೊಡ್ಡ ಜಾಗತಿಕ ವೇದಿಕೆಯಲ್ಲಿ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಸುವರ್ಣಾವಕಾಶ ಒದಗಿಸಿದೆ.
ಹಾಗೆಯೇ ವಿಶ್ವ ಕೌಶಲ್ಯ ಸ್ಪರ್ಧೆಯಲ್ಲಿ ಪದಕಗಳನ್ನು ಗೆಲ್ಲುವುದರ ಮೂಲಕ ಭಾರತವನ್ನು ಪ್ರತಿನಿಧಿಸಲು ಅವಕಾಶ ನೀಡುತ್ತಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಇಂಡಿಯಾ ಸ್ಕಿಲ್ಸ್ ಕರ್ನಾಟಕ-2025 (ವಲ್ರ್ಡ್ ಸ್ಕಿಲ್ಸ್) ಸ್ಪರ್ಧೆಯಲ್ಲಿ ಜಗತ್ತಿನಾದ್ಯಂತ 75 ಕ್ಕಿಂತಲೂ ಹೆಚ್ಚು ದೇಶಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. 16 ರಿಂದ 25 ವರ್ಷದೊಳಗಿನ ಯುವಜನತೆ 63 ಕ್ಕೂ ಹೆಚ್ಚು ಕೌಶಲ್ಯದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತಿದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಶ್ರೇಷ್ಟತೆಯ ಕಾರ್ಯಕ್ರಮವಾಗಿದೆ.
2026 ನೇ ಸಾಲಿಗೆ ವಿಶ್ವ ಕೌಶಲ್ಯ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದೆ. ಕರ್ನಾಟಕ ರಾಜ್ಯದ ಯುವ ಜನತೆಯ ಜ್ಞಾನಾರ್ಜನೆಗೆ ಸೂಕ್ತ ವೇದಿಕೆ ಕಲ್ಪಿಸಲು ಹಾಗೂ ಮಾದರಿ ಕೌಶಲ್ಯಾಭರಿತ ರಾಜ್ಯವನ್ನಾಗಿಸಲು 2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ (ಇಂಡಿಯಾ ಸ್ಕಿಲ್ಸ್ ಕರ್ನಾಟಕ-2025) ಸ್ಪರ್ಧಾ ಕಾರ್ಯಕ್ರಮವನ್ನು ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟಗಳಲ್ಲಿ ಕೈಗೊಳ್ಳಲು ಯೋಜಿಸಲಾಗಿದೆ.
ಇದನ್ನೂ ಓದಿ:Asia Cup T20 Cricket: ಇಂದಿನಿಂದ ಏಷ್ಯಾಕಪ್: 19 ಪಂದ್ಯಗಳಲ್ಲಿ 8 ದೇಶಗಳ ಸೆಣಸಾಟ!
ಸ್ಪರ್ಧೆಯಲ್ಲಿ ಭಾಗವಹಿಸುವವರು https://www.skillindiadigital.gov.in/home ಲಿಂಕ್ ಬಳಸುವ ಮೂಲಕ ಸೆಪ್ಟೆಂಬರ್, 30 ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗೆ +919606492216 ಗೆ ಕರೆ ಮಾಡಿ ಅಥವಾ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಕಚೇರಿ ಕೊಡಗು ಜಿಲ್ಲೆ, ಮಡಿಕೇರಿ ರವರನ್ನು ಕಚೇರಿಯ ವೇಳೆಯಲ್ಲಿ ಭೇಟಿ ನೀಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ರೇಖಾ ಗಣಪತಿ ಅವರು ತಿಳಿಸಿದ್ದಾರೆ.
