Dr Bro: ವಿಶ್ವವನ್ನು ಸುತ್ತುತ್ತ, ವಿಡಿಯೋ ಮಾಡಿ ಕನ್ನಡಿಗರಿಗೆ ಪರಿಚಯಿಸುತ್ತಾ ಸಾಕಷ್ಟು ಜನಪ್ರಿಯತೆ ಗಳಿಸಿರುವ ಡಾ.ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ವಿರುದ್ಧ ಕ್ಯಾಬ್ ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಕಾರಣ ʼನಮ್ಮ ಯಾತ್ರಿʼ (Namma Yatri) ಅಪ್ಲಿಕೇಷನ್ ಪ್ರಮೋಟ್ ಮಾಡಿರುವುದು.
ಹೌದು, ನಮ್ಮ ಯಾತ್ರಿ ಬಗ್ಗೆ ವಿಡಿಯೊವೊಂದನ್ನು ಡಾ.ಬ್ರೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಕಮಿಷನ್ ಇಲ್ಲ, ಕೇವಲ ಸರಳವಾದ ವೇದಿಕೆ, ದಿನಕ್ಕೆ ಶುಲ್ಕ: 25 ರೂ ಅಥವಾ ಒಂದು ರೈಡ್‌ಗೆ 3.5 ರೂ. ಎಂದು ಕ್ಯಾಪ್ಟನ್ ನೀಡಿ, ʼನಮ್ಮ ಯಾತ್ರಿʼ ಅಪ್ಲಿಕೇಷನ್ ಅನ್ನು ಪ್ರಮೋಟ್ ಮಾಡಿದ್ದಾರೆ. ಇದು ಆಟೋ ಚಾಲಕರು ಹಾಗೂ ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ.
ಡಾ. ಬ್ರೋ ಹಂಚಿಕೊಂಡಿರುವ ವಿಡಿಯೋದಲ್ಲಿ ನಮ್ಮ ಯಾತ್ರಿ ಕ್ಯಾಬ್, ಆಟೋ ಚಾಲಕರಿಗೆ ವರದಾನವಾಗಿದ್ದು ಇಲ್ಲಿ ಕಮಿಷನ್ ಇಲ್ಲ, ದಿನಕ್ಕೆ 25 ರೂಪಾಯಿ ಅಥವಾ ಪ್ರಯಾಣಕ್ಕೆ 3.5 ರೂಪಾಯಿ ಮಾತ್ರ ಕಮಿಷನ್ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಈ ಬಗ್ಗೆ ಕರ್ನಾಟಕ ಚಾಲಕರ ಪರಿಷತ್ ಅಧ್ಯಕ್ಷ ಕೆ. ಸೋಮಶೇಖರ್ ಅಸಮಾಧಾನ ಹೊರಹಾಕಿದ್ದು, ಡಾ ಬ್ರೋ ತಪ್ಪಾದ ಮಾಹಿತಿ ನೀಡುವ ಮೂಲಕ ಆಟೋ / ಕ್ಯಾಬ್ ಚಾಲಕೆ ದಾರಿ ತಪ್ಪಿಸಿದ್ದಾರೆ ಎಂದು ಕೆ. ಆರೋಪಿಸಿದ್ದಾರೆ. ಆಪ್‌ಗಳು ಚಾಲಕರನ್ನು ಸುಲಿಗೆ ಮಾಡುತ್ತಿವೆ ಎಂದಿರುವ ಅವರು ಡಾ ಬ್ರೋ ವಿಡಿಯೋ ಡಿಲೀಟ್ ಮಾಡಬೇಕು, ಕನ್ನಡಿಗ ಚಾಲಕರ ಪರವಾಗಿ ನಿಲ್ಲಬೇಕು ಎಂದಿದ್ದಾರೆ. ಅಲ್ಲದೆ ಕರ್ನಾಟಕ ರಾಜ್ಯ ಚಾಲಕರ ಪರಿಷತ್ ವತಿಯಿಂದ ಡಾ.ಬ್ರೋ ಅವರಿಗೆ ಮನವಿ ಪತ್ರ ಕೂಡ ನೀಡಲಾಗಿದೆ. ಹೀಗಿದ್ದರೂ ಡಾ.ಬ್ರೋ ವಿಡಿಯೋ ಡಿಲೀಟ್ ಮಾಡದೆ ಶೀರ್ಷಿಕೆಯನ್ನು ಮಾತ್ರ ಬದಲಾಯಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
