Jaffar Express Train: ಪಾಕಿಸ್ತಾನದ ಜಾಫರ್ ಎಕ್ಸ್‌ಪ್ರೆಸ್ ರೈಲನ್ನು ಬಲೂಚಿಸ್ತಾನ್ ಪ್ರಾಂತ್ಯದ ಪ್ರತ್ಯೇಕತಾವಾದಿ ಉಗ್ರರ ಗುಂಪು ಬೋಲಾನ್ ಪ್ರದೇಶದಲ್ಲಿ ಇಂದು (ಮಂಗಳವಾರ) ಹೈಜಾಕ್ ಮಾಡಿರುವ ಕುರಿತು ವರದಿಯಾಗಿದ್ದು, ಒಟ್ಟು 400 ಜನರು ಪ್ರಯಾಣಿಕರು ಇದರಲ್ಲಿ ಪ್ರಯಾಣ ಮಾಡುತ್ತಿದ್ದರು.
ಈ ಹೈಜಾಕ್ ಹೊಣೆಯನ್ನು ಬಲೂಚ್ ಲಿಬರೇಶನ್ ಆರ್ಮಿ (BLA) ಭಯೋತ್ಪಾದಕ ಗುಂಪು ಹೊತ್ತುಕೊಂಡಿದ್ದು, ಈ ದಾಳಿಯಲ್ಲಿ ಆರು ಮಂದಿ ಸೈನಿಕರು ಹತ್ಯೆಗೀಡಾಗಿದ್ದಾರೆ. ರೈಲು ಚಾಲಕ ಗಾಯಗೊಂಡಿದ್ದು ಭಯೋತ್ಪಾದಕರು ಒಟ್ಟು 120 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡಿರುವ ಕುರಿತು ವರದಿಯಾಗಿದೆ.
ಒತ್ತೆಯಾಳುಗಳಲ್ಲಿ ರಜೆಯ ಮೇಲೆ ಪಂಜಾಬ್‌ಗೆ ಪ್ರಯಾಣ ಮಾಡುತ್ತಿದ್ದ ಪಾಕಿಸ್ತಾನಿ ಮಿಲಿಟರಿ, ಪೊಲೀಸ್, ಭಯೋತ್ಪಾದಕ ನಿಗ್ರಹ ದಳ, ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್ ಕರ್ತವ್ಯ ನಿರತ ಸಿಬ್ಬಂದಿಗಳು ಇದ್ದಾರೆ. ಸೆರೆ ಸಿಕ್ಕ ಮಹಿಳೆಯರು ಮಕ್ಕಳು ಮತ್ತು ಬಲೂಚಿಸ್ತಾನದ ಪ್ರಯಾಣಿಕರನ್ನು ಬಿಡುಗಡೆ ಮಾಡಲಾಗಿದೆ ಎಂದು ಉಗ್ರರ ಗುಂಪು ಹೇಳಿದೆ.
ಘಟನಾ ಸ್ಥಳಕ್ಕೆ ಭದ್ರತಾ ಪಡೆಗಳು ತಲುಪಿದೆ ಎಂದು ಸರಕಾರಿ ವಕ್ತಾರ ಶಾಹಿದ್ ರಿಂಡ್ ಹೇಳಿದ್ದಾರೆ.
ನಮ್ಮ ವಿರುದ್ಧ ಸೇನೆ ಯಾವುದೇ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ಅದರ ಪರಿಣಾಮ ಕೆಟ್ಟದಾಗಿರುತ್ತದೆ. ನಮ್ಮ ಬಳಿ 100 ಕ್ಕೂ ಹೆಚ್ಚು ಮಂದಿ ಒತ್ತೆಯಾಳುಗಳಿದ್ದಾರೆ. ಏನಾದರೂ ಎಡವಟ್ಟು ಮಾಡಿದರೆ 100 ಕ್ಕೂ ಹೆಚ್ಚು ಒತ್ತೆಯಾಳುಗಳನ್ನು ಗಲ್ಲಿಗೇರಿಸಲಾಗುವುದು. ಈ ರಕ್ತಪಾತದ ಜವಾಬ್ದಾರಿ ಸೇನೆಯೇ ಹೊರಬೇಕಾಗುತ್ತದೆ ಎನ್ನುವ ಎಚ್ಚರಿಕೆಯ ಸಂದೇಶವನ್ನು ಉಗ್ರರ ಗುಂಪು ನೀಡಿದೆ.
