Home » ಪರಶುರಾಮ ಥೀಮ್‌ ಪಾರ್ಕ್‌ ಸ್ವಚ್ಛತೆ ಕಾರ್ಯ ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆ ಜವಾಬ್ದಾರಿ

ಪರಶುರಾಮ ಥೀಮ್‌ ಪಾರ್ಕ್‌ ಸ್ವಚ್ಛತೆ ಕಾರ್ಯ ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆ ಜವಾಬ್ದಾರಿ

0 comments
Karkala Parasurama theme park

ಕಾರ್ಕಳ: ಪರಶುರಾಮ ಥೀಮ್‌ ಪಾರ್ಕ್‌ ಆವರಣವು ಪಾಳು ಬಿದ್ದ ರೀತಿಯಲ್ಲಿದ್ದು, ಪಾರ್ಕ್‌ ಸ್ವಚ್ಛತೆ, ನಿರ್ವಹಣೆ ಹಾಗೂ ಭದ್ರತೆಗೆ ಸಂಬಂಧಪಟ್ಟಂತೆ ಉಡುಪಿ ಜಿಲ್ಲಾಧಿಕಾರಿಯವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಪಾರ್ಕ್‌ ಕುರಿತು ಸಿಐಡಿ ತನಿಖೆ ಹಾಗೂ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಸಾರ್ವಜನಿಕರಿಂದ ಸ್ವಚ್ಛತಾ ಕೆಲಸ ಮಾಡುವುದು ಸೂಕ್ತವಲ್ಲ ಎಂದು ಜಿಲ್ಲಾಧಿಕಾರಿಯವರು ಸ್ಪಷ್ಟವಾಗಿ ಹೇಳಿದ್ದಾರೆ.

ಪಾರ್ಕ್‌ ಕಾಮಗಾರಿ ಸಂಪೂರ್ಣ ಹಸ್ತಾಂತರವಾಗುವವರೆಗೂ ಅನುಷ್ಠಾನ ಸಂಸ್ಥೆಯಾದ ನಿರ್ಮಿತಿ ಕೇಂದ್ರ ಉಡುಪಿ ಸಂಸ್ಥೆಯೇ ಸ್ವಚ್ಛತೆ, ನಿರ್ವಹಣೆ ಹಾಗೂ ಭದ್ರತೆಗೆ ಸಂಪೂರ್ಣ ಜವಾಬ್ದಾರಿಯಾಗಿರುತ್ತದೆ ಎಂದು ಆದೇಶ ನೀಡಲಾಗಿದೆ. ಹಾಗಾಗಿ 24×7 ಕಾವಲುಗಾರರ ನಿಯೋಜನೆ, ಸ್ವಚ್ಛತಾ ಕೆಲಸ, ಗಿಡಗಂಟಿ ತೆರವು ಕಸ ವಿಲೇವಾರಿ, ಸಿಸಿ ಕ್ಯಾಮೆರಾ ಅಳವಡಿಕೆ ಕೈಗೊಳ್ಳಲು ಸೂಚನೆ ನೀಡಲಾಗಿದೆ.

ಅನಧಿಕೃತ ಪ್ರವೇಶ ತಡೆಯುವುದು, ಅತಿಕ್ರಮಣ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು, ರಸ್ತೆ ಸ್ವಚ್ಛತೆ ಕಾಪಾಡುವುದು ಹಾಗೂ ಅಮೂಲ್ಯ ವಸ್ತುಗಳ ರಕ್ಷಣೆಗೂ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ಕೈಗೊಂಡ ಕ್ರಮಗಳ ಅನುಪಾಲನ ವರದಿಯನ್ನು ಜನವರಿ 10ರೊಳಗೆ ಸಲ್ಲಿಸುವಂತೆ ಹಾಗೂ ಪ್ರತಿವಾರ ಜಿಪಿಎಸ್ ಸಹಿತ ಫೋಟೊಗಳೊಂದಿಗೆ ವರದಿ ನೀಡುವಂತೆ ಆದೇಶಿಸಲಾಗಿದೆ.

ಜ.14 ರಿಂದ ಸ್ವಚ್ಛತಾ ಕಾರ್ಯ ಹಾಗೂ ಒಂದು ತಿಂಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಅವಕಾಶ ಕೋರಿ ತಾವು ಬರೆದ ಪತ್ರಕ್ಕೆ ಉಡುಪಿ ಜಿಲ್ಲಾಧಿಕಾರಿಗಳು ಸಕಾಲಿಕವಾಗಿ ಸ್ಪಂದಿಸಿದ್ದಾರೆ ಎಂದು ಕಾರ್ಕಳ ಶಾಸಕ ಹಾಗೂ ಸಚಿವ ವಿ.ಸುನಿಲ್‌ ಕುಮಾರ್‌ ಹೇಳಿದ್ದಾರೆ.

2027 ರಲ್ಲಿ ನಡೆಯಲಿರುವ ಕಾರ್ಕಳದ ಶ್ರೀ ಬಾಹುಬಲಿ ಮಹಾಮಸ್ತಕಾಭಿಷೇಕದೊಳಗೆ ಪರಶುರಾಮ ಥೀಮ್‌ ಪಾರ್ಕ್‌ ಯೋಜನೆ ಪೂರ್ಣಗೊಳ್ಳಬೇಕು. ಮಸ್ತಕಾಭಿಷೇಕಕ್ಕೆ ಬರುವ ಭಕ್ತರು ಪಾರ್ಕ್‌ ವೀಕ್ಷಿಸಲು ಅವಕಾಶ ಕಲ್ಪಿಸುವಂತೆ ಜಿಲ್ಲಾಡಳಿತ ಕಾರ್ಯನಿರ್ವಹಣೆ ಮಾಡಲಿ ಎಂದು ವಿ. ಸುನಿಲ್‌ ಕುಮಾರ್‌ ಆಶಯ ವ್ಯಕ್ತಪಡಿಸಿದ್ದಾರೆ.

You may also like