Pehalgam Attack: ಕಾಶ್ಮೀರದ ಪಹಲ್ಗಾವ್‌ನಲ್ಲಿ ನಡೆದ ಭಯೋತ್ಪಾದಕರ ಭೀಕರ ದಾಳಿಯಲ್ಲಿ ಶಿವಮೊಗ್ಗದ ಮಂಜುನಾಥ್ ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿದ್ದ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ ಭರತ್ ಭೂಷಣ್ (41) ಮೃತರಾಗಿದ್ದಾರೆ. ಇದರ ನಡುವೆ ಐಸ್ ಕ್ರೀಮ್ ಕನ್ನಡಿಗರೊಬ್ಬರ ಜೀವವನ್ನು ಉಳಿಸಿದೆ ಎನ್ನಲಾಗಿದೆ.
ಹೌದು, ಕನ್ನಡಿಗರೊಬ್ಬರು ಉಗ್ರರ ದಾಳಿಯಿಂದ ನಮ್ಮನ್ನು ಕಾಪಾಡಿದ್ದು ಒಂದು ಐಸ್ ಕ್ರೀಂ ಎಂದಿದ್ದಾರೆ. ಬೆಂಗಳೂರಿನ ನ್ಯೂ ತಿಪ್ಪಸಂದ್ರದ ಸುಮನಾ ಭಟ್ ಕೂಡಾ ತಾವು ಕೆಲಸ ಮಾಡುತ್ತಿದ್ದ ಟೈಮೆಕ್ಸ್ ಸಂಸ್ಥೆಯ 17 ಮಂದಿ ಉದ್ಯೋಗಿಗಳೊಂದಿಗೆ ಕಾಶ್ಮೀರ ಪ್ರವಾಸ ಮಾಡಿದ್ದರು. ಇನ್ನೇನು ಅವರು ಪೆಹಲ್ಗಾಮ್ ಗೆ ತಲುಪಬೇಕಿತ್ತು. ಆದರೆ ಅವರನ್ನು ಐಸ್ ಕ್ರೀಂ ತಿನ್ನುವ ಬಯಕೆ ಕಾಪಾಡಿತ್ತು.
ಸುಮನಾ ಭಟ್ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಐಸ್‌ಕ್ರೀಂ ನಮ್ಮ ಜೀವ ಉಳಿಸಿದೆ. ಟೂರ್ ಗೈಡ್ ಪಹಲ್ಗಾಮ್ ಬಗ್ಗೆ ತುಂಬಾ ಮಾಹಿತಿ ನೀಡಿದ್ರು. ಅದರ ಬಗ್ಗೆ ನಾವು ತುಂಬಾ ಉತ್ಸುಕರಾಗಿದ್ದೆವು. ತಿನ್ನೋದಕ್ಕೆ ಸ್ವಲ್ಪ ಹಿಂದೆ ಉಳಿದುಕೊಂಡೆವು. ಕೆಲ ಸಮಯದ ನಂತರ ಅಲ್ಲಿಂದ ಜನರು ಓಡಿ ಬರುತ್ತಿದ್ದರು.
ಜೀವ ಉಳಿಸಿಕೊಳ್ಳಬೇಕಾದ್ರೆ ಈಗಲೇ ಹೊರಡಿ ಎಂದು ಕೂಗಿದರು. ನಾವು ಬಿಟ್ಟೂ ಬಿಡದಂತೆ ಎರಡು ಮೂರು ಕಿಲೋಮೀಟರ್ ಓಡಿ ಹೋಗಿ ಪ್ರಾಣ ಉಳಿಸಿಕೊಂಡೆವು. ಹೊಟೇಲ್‌ಗೆ ಹೋಗಿ ಅಲ್ಲಿ ಲಗೇಜ್ ತೆಗೆದುಕೊಂಡು ಭಾರತೀಯ ಸೇನೆಯ ವಾಹನಗಳಲ್ಲಿ ಜಮ್ಮುವಿಗೆ ಮರಳಿದೆವು ಎಂದು ಸುಮನಾ ಭಟ್ ಮಾಹಿತಿ ನೀಡಿದ್ದಾರೆ.
