Mangaluru : ಪೆಟ್ರೋಲ್ ಬಂಕ್‌ನಿಂದ ಸಾಲದ ರೂಪದಲ್ಲಿ ಪೆಟ್ರೋಲ್ ಪಡೆದು ಲಕ್ಷಾಂತರ ರೂ. ವಂಚಿಸಿದ ಬಸ್ ಮಾಲಕಿಗೆ ಚೆಕ್ ಅಮಾನ್ಯ ಪ್ರಕರಣದಲ್ಲಿ ಮಂಗಳೂರಿನ 5ನೇ ಜೆಎಂಎಫ್‌ಸಿ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದೆ.
ನಗರದ ಶೇಡಿಗುಡ್ಡೆಯ ಪಿವಿಎಸ್ ವೃತ್ತ ಸಮೀಪದ ಸಿಟಿ ಪ್ಲಾಜಾ ಕಟ್ಟಡದಲ್ಲಿ ಆರೆಂಜ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮತ್ತು ಕೆನರಾ ಬಸ್ ಎಂಬ ಹೆಸರಿನಲ್ಲಿ ಉದ್ಯಮ ನಡೆಸುತ್ತಿದ್ದ ಲೋಕೇಶ್ ಶೆಟ್ಟಿಯ ಪತ್ನಿ ಸುಕನ್ಯಾ ಶೆಟ್ಟಿ ಶಿಕ್ಷೆಗೊಳಗಾದ ಬಸ್ ಮಾಲಕಿ. ಅವರು ಮಂಗಳೂರಿನ ಪೆಟ್ರೋಲ್ ಬಂಕ್‌ನಿಂದ ಇಂಧನವನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳುತ್ತಿದ್ದರು. ಸಾಲದ ಪಾವತಿಗಾಗಿ ಅವರು 2020ರ ಫೆಬ್ರವರಿ ತಿಂಗಳಿನಲ್ಲಿ 2 ಚೆಕ್ ನೀಡಿದ್ದರು. ಆ ಚೆಕ್‌ಗಳು ಅಮಾನ್ಯಗೊಂಡಿದ್ದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲಕರು ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಚಿರಾಗ್ ಅವರು ಆರೋಪಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ ಎರಡು ತಿಂಗಳು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪೆಟ್ರೋಲ್ ಬಂಕ್ ಮಾಲಕರ ಪರ ಮಂಗಳೂರಿನ ನ್ಯಾಯವಾದಿ ಸುಕೇಶ್ ಕುಮಾರ್ ಶೆಟ್ಟಿ ವಾದಿಸಿದ್ದರು.
