South Korea: ದಕ್ಷಿಣ ಕೊರಿಯಾದಲ್ಲಿ ಉಂಟಾದ ವಿಮಾನ ಪತನ ಅಕ್ಷರಶಃ ಆತಂಕಕ್ಕೆ ದೂಡಿದೆ. ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಅಪಘಾತದಲ್ಲಿ ಕೊರಿಯಾದ ಜೆಜು ಏರ್ ಫ್ಲೈಟ್ನ 179 ಪ್ರಯಾಣಿಕರು ದುರಂತ ಅಂತ್ಯ ಕಂಡಿದ್ದು, ಇಬ್ಬರು ಮಾತ್ರ ಪವಾಡದಂತೆ ಬದುಕುಳಿದಿದ್ದಾರೆ. ಈ ದುರಂತದ ಕುರಿತು ಇದೀಗ ಸಾಕಷ್ಟು ಸುದ್ದಿಗಳು ಕೇಳಿ ಬರುತ್ತಿವೆ. ಆದರೆ ಇಷ್ಟು ಜನರ ಪ್ರಾಣ ತೆಗೆಯುವುದಕ್ಕೆ ಅಂಗೈ ಅಗಲದ ಜೀವಿಯೆ ಕಾರಣ ಎನ್ನಲಾಗುತ್ತಿದೆ.
ಹೌದು, ದಕ್ಷಿಣ ಕೊರಿಯಾದಲ್ಲಿ ವಿಮಾನ ಹೇಗೆ ಪತನವಾಯಿತು ಎಂಬ ಕುರಿತು ತನಿಖೆಗಳು ನಡೆಯುತ್ತಿವೆ. ಈ ನಡುವೆ ಪಕ್ಷಿಗಳ ಬಡಿತ ಮತ್ತು ಕೆಟ್ಟ ಹವಾಮಾನ ಕೂಡ ಅವಘಡಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅಲ್ಲದೆ ಮುವಾನ್‌ನಲ್ಲಿ ಅಪಘಾತಕ್ಕೀಡಾದ ವಿಮಾನಕ್ಕೆ ಹಕ್ಕಿ ಡಿಕ್ಕಿಯಾಗಿತ್ತು. ದುರಂತ ಸಂಭವಿಸುವುದಕ್ಕೆ ಕೆಲವೇ ಕ್ಷಣಗಳ ಮೊದಲು ಅಪಾಯದ ಘೋಷಣೆ ಮಾಡಲಾಗಿತ್ತು ಎಂದು ಜೆಜು ಏರ್ ವಿಮಾನಯಾನ ಸಂಸ್ಥೆಯ ಜೆಟ್ ಪೈಲಟ್ ಹೇಳಿದ್ದಾರೆ ಎಂದು ದಕ್ಷಿಣ ಕೊರಿಯಾದ ಸಾರಿಗೆ ಸಚಿವಾಲಯ ತಿಳಿಸಿದೆ.
ಏನಿದು ಬರ್ಡ್ ಸ್ಟ್ರೈಕ್?
ಬರ್ಡ್ ಸ್ಟ್ರೈಕ್ ಎಂದರೆ ಹಾರಾಟದಲ್ಲಿ ವಿಮಾನ ಮತ್ತು ಪಕ್ಷಿಗಳ ನಡುವಿನ ಘರ್ಷಣೆಯಾಗಿದೆ. ಅಂದರೆ ವಿಮಾನ ಹೋಗುತ್ತಿರುವಾಗ ಅಥವಾ ಲ್ಯಾಂಡಿಂಗ್ ಮಾಡುವಾಗ ಹಕ್ಕಿಗಳು ವಿಮಾನಕ್ಕೆ ಬಂದು ಡಿಕ್ಕಿ ಹೊಡೆಯುವ ಒಂದು ಸನ್ನಿವೇಶವಾಗಿದೆ.
ಪಕ್ಷಿಗಳು ವಿಮಾನಕ್ಕೆ ಡಿಕ್ಕಿ ಹೊಡೆಯಲು ಕಾರಣವೇನು?
ವಾಯುನೆಲೆಯ ಸುತ್ತಲೂ ಪಕ್ಷಿಗಳ ಸಂಖ್ಯೆ ಹೆಚ್ಚಿದ್ದರೆ ಇಂತಹ ಅವಘಡಗಳ ಸಾಧ್ಯತೆ ಹೆಚ್ಚಿರುತ್ತದೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಸಂಗ್ರಹವಾಗುವ ಕಾರಣ ಇಲ್ಲಿ ಕೀಟಗಳು ನೆಲೆಸುತ್ತವೆ. ಇಂತಹ ಪ್ರದೇಶದಲ್ಲಿ ಪಕ್ಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಕೆಳಕ್ಕೆ ಮಾತ್ರವಲ್ಲದೇ ವಿಮಾನಗಳು ಮೇಲಕ್ಕೆ ಹಾರುತ್ತಿರುವಾಗಲೂ ಪಕ್ಷಿಗಳ ಡಿಕ್ಕಿ ಅವಘಡಗಳು ಸಂಭವಿಸುತ್ತದೆ. ಇವುಗಳು ಕಡಿಮೆ-ಎತ್ತರದ ಸ್ಟ್ರೈಕ್‌ಗಳಿಗಿಂತ ಹೆಚ್ಚು ಅಪಾಯಕಾರಿ ಎನ್ನುತ್ತಾರೆ ಅಧಿಕಾರಿಗಳು.
