Private schools: ಆಗಸ್ಟ್ 21ರ ಬಳಿಕ ಕರ್ನಾಟಕ ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು (Private schools) ಬಂದ್ ಮಾಡಲು ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ.
ಹೌದು, ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟವು, ಶಾಲಾ ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ ಹಾಗೂ ಖಾಸಗಿ ಶಾಲೆಗಳ ಮೇಲಿನ ಅನ್ಯಾಯ ವಿರೋಧಿಸಿ ಶಾಲೆಗಳನ್ನು ಬಂದ್ ಮಾಡಿ ಪ್ರತಿಭಟನೆ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನು ರವಾನಿಸಲಾಗಿದೆ. ಈ ಕುರಿತು ಇಂದು ರುಪ್ಸಾ ಕರ್ನಾಟಕ ಅಧ್ಯಕ್ಷ ಲೇಪಾಕ್ಷಿ ಹಾಲನೂರು ಅಧ್ಯಕ್ಷತೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ವಿವಿಧ ಬೇಡಿಕೆಗಳನ್ನು ಮುಂದಿರಿಸಿ ಅವುಗಳನ್ನು ಕಾರ್ಯರೂಪಕ್ಕೆ ತರುವಂತೆ ಆಗ್ರಹಿಸಿ ಸರ್ಕಾರಕ್ಕೆ ಮುಂದಿನ 15 ದಿನ ಕಾಲಾವಕಾಶವನ್ನು ನೀಡಲಾಗಿದೆ.
ಪತ್ರಿಕಾಗೋಷ್ಠಿ ವೇಳೆ ಮಾತನಾಡಿದ ಹಾಲನೂರು ಲೇಪಾಕ್ಷಿ ಅವರು, 15 ದಿನದಲ್ಲಿ ಇಲಾಖೆ ನಡೆಸುತ್ತಿರುವ ಕ್ರಮಗಳಿಂದ ಹಿಂದೆ ಸರಿಯಬೇಕು. ಶಾಲಾ ಶಿಕ್ಷಣ ಇಲಾಖೆಯಲ್ಲಿನ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಬೇಕು. ಖಾಸಗಿ ಶಿಕ್ಷಣ ಸಂಸ್ಥೆಗಳ ತೆರಿಗೆ ಬಾಕಿ ವಸೂಲಿ ಕೈ ಬಿಡಬೇಕು. ಈ ಬಗ್ಗೆ ಆಗಸ್ಟ್ 21ರ ವರೆಗೆ ಗಡುವು ನೀಡದ್ದೇವೆ ಎಂದು ಹೇಳಿದರು.
ಇನ್ನು ರುಪ್ಸಾ ಸೇರಿ ಖಾಸಗಿ ಶಾಲೆಗಳ ಒಕ್ಕೂಟದ ಜೊತೆ ಸರ್ಕಾರ ಸಭೆ ಮಾಡಬೇಕು. ಇಲಾಖೆಯಿಂದ ಆಗುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಸರ್ಕಾರ ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ, ಶಾಲೆ ಬಂದ್ ಮಾಡಿ ಬೆಂಗಳೂರು ಚಲೋ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಅಧಿಕಾರಿಗಳ ದುರಾಡಳಿತದಿಂದ ರಾಜ್ಯದ ಶಿಕ್ಷಣದ ವ್ಯವಸ್ಥೆ ಹಾಳಾಗುತ್ತಿದೆ ಎಂದು ರುಪ್ಸಾ ಸಂಘಟನೆ ಆರೋಪಿಸಿದೆ. ಇಲಾಖೆಯಲ್ಲಿರುವ ಕೆಲ ಭ್ರಷ್ಟಾಡಳಿದ ಅಧಿಕಾರಿಗಳಿಂದ ಶಾಲೆಗಳ ಮಕ್ಕಳ ಶೈಕ್ಷಣಿಕ ಜೀವನವೇ ಸರ್ವನಾಶ ಆಗುತ್ತಿದೆ. ಜೊತೆಗೆ ಶಾಲೆಗಳ ನವೀಕರಣಕ್ಕೆ ಇಲಾಖೆಯ 64 ಅಂಶಗಳನ್ನ ನಿಗದಿಪಡಿಸಿದ್ದು, ಅವುಗಳ ದಾಖಲೆ ಕೇಳಿದೆ. ಇದೆಲ್ಲವೂ ಶಿಕ್ಷಣ ಇಲಾಖೆ ಆಕ್ಟ್ ವಿರುದ್ಧದ ನಡೆಯಾಗಿದೆ ಎಂದು ರುಪ್ಸಾ ಸಂಘಟನೆ ಅಧ್ಯಕ್ಷ ಹಾಲುನೂರು ಎಸ್ ಲೇಪಾಕ್ಷಿ ಕೆಂಡಕಾರಿದ್ದಾರೆ.
