Promotion : ರಾಜ್ಯದ ಸರಕಾರಿ ಪ್ರೌಢಶಾಲಾ ಶಿಕ್ಷಕರಿಗೆ ರಾಜ್ಯ ಸರ್ಕಾರವು ಗುಡ್ ನ್ಯೂಸ್ ನೀಡಿದ್ದು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಗೆ ಬಡ್ತಿ ನೀಡಲು ಅರ್ಹತಾ ಪರೀಕ್ಷೆಯನ್ನು ನಡೆಸುವ ಕುರಿತು ಆದೇಶವನ್ನು ಹೊರಡಿಸಿದೆ.
ಹೌದು, ಶಾಲಾ ಶಿಕ್ಷಣ ಇಲಾಖೆಯ (ಪದವಿಪೂರ್ವ) ಉಳಿಕೆ ಮೂಲ ಉಪನ್ಯಾಸಕರ ವೃಂದದ ಮತ್ತು ಕಲ್ಯಾಣ ಕರ್ನಾಟಕ ರಾಜ್ಯ ವ್ಯಾಪ್ತಿಯ ಸ್ಥಳಿಯ ಉಪನ್ಯಾಸಕರ ವೃಂದದ (ಎರಡು ವೃಂದಗಳನ್ನು ಒಳಗೊಂಡಂತೆ) ಖಾಲಿ ಹುದ್ದೆಗಳಿಗೆ ಸರ್ಕಾರಿ ಪ್ರೌಢಶಾಲಾ ಸಹಶಿಕ್ಷಕರ ವೃಂದದಿಂದ ಸರ್ಕಾರಿ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ವೃಂದದ ಹುದ್ದೆಗೆ ಬಡ್ತಿ ನೀಡಲು ಇಲಾಖೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಗದಿಪಡಿಸಿರುವ ಅರ್ಹತಾ ಪರೀಕ್ಷೆ ನಡೆಸಿ, ನಿಗದಿತ ಮೀಸಲಾತಿ ನಿಯಮಗಳನ್ವಯ ಜೇಷ್ಠತಾ ಪಟ್ಟಿಯನುಸಾರ ಅಂತಿಮ ಅರ್ಹತಾ ಪಟ್ಟಿಯನ್ನು ನೀಡುವ ಸಂಬಂಧ ಅರ್ಹತಾ ಪರೀಕ್ಷೆಯ ಈ ಅಧಿಸೂಚನೆ ಹೊರಡಿಸಲಾಗಿರುತ್ತದೆ.
ಫೆ.22ರಂದು 2 ಅವಧಿಯಲ್ಲಿ ಪರೀಕ್ಷೆ ನಡೆಯಲಿದೆ. ಮೊದಲ ಅವಧಿ ಬೆಳಗ್ಗೆ 9.30ರಿಂದ ಮಧ್ಯಾಹ್ನ 12 ಮತ್ತು 2ನೇ ಅವಧಿ ಮಧ್ಯಾಹ್ನ 2ರಿಂದ ಸಂಜೆ 4.30ರವರೆಗೆ ನಿಗದಿಯಾಗಿದೆ. ಮೊದಲ ಅವಧಿಯಲ್ಲಿ ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು ಮತ್ತು ಸಂಸ್ಕೃತ ಪರೀಕ್ಷೆ ನಡೆಯಲಿದೆ. 2ನೇ ಅವಧಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ, ಭೂಗೋಲಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳ ಪರೀಕ್ಷೆ ನಡೆಯಲಿದೆ. ವಿವರಣಾತ್ಮಕ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ಇರಲಿದೆ.
ಇನ್ನು ಬಡ್ತಿ ಕೋಟಾದಲ್ಲಿ ಕನ್ನಡ ವಿಷಯದಲ್ಲಿ 229, ಇಂಗ್ಲಿಷ್ 89, ಹಿಂದಿ 19, ಉರ್ದು 16, ಸಂಸ್ಕತ 10. ಇತಿಹಾಸ 59, ಅರ್ಥಶಾಸ್ತ್ರ 110, ಭೂಗೋಲಶಾಸ್ತ್ರ 20, ಸಮಾಜ ಶಾಸ್ತ್ರ 146, ರಾಜ್ಯಶಾಸ್ತ್ರ 55, ಗಣಿತ 17 ಮತ್ತು ಜೀವಶಾಸ್ತ್ರ 19 ಹುದ್ದೆಗಳಿದ್ದು, ಒಟ್ಟು 789 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಡಿ.29ರಿಂದ ಜ. 28ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಫೆ.12ರಿಂದ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರದಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ. ಅರ್ಹತೆ ಪಡೆಯಲು 100 ಅಂಕಗಳಲ್ಲಿ ಕನಿಷ್ಠ 50 ಅಂಕ ಗಳಿಕೆ ಕಡ್ಡಾಯವಾಗಿದೆ.
